08/03/2026

Law Guide Kannada

Online Guide

ಎಎಬಿ ನಿರ್ಣಯಕ್ಕೆ ಹೈಕೋರ್ಟ್ ನ್ಯಾ. ನಟರಾಜನ್ ತೀವ್ರ ಆಕ್ಷೇಪ

ಬೆಂಗಳೂರು: ಬೆಂಗಳೂರು ವಕೀಲರ ಸಂಘ (ಎಎಬಿ) ಇತ್ತೀಚೆಗೆ ಕೈಗೊಂಡಿರುವ ಸರ್ವ ಸದಸ್ಯರ ವಿಶೇಷ ತುರ್ತು ಸಭೆಯ ಠರಾವಿನಲ್ಲಿ, ‘ಪಾರ್ಟ್ ಹರ್ಡ್’ (ಭಾಗಶಃ ಆಲಿಕೆ) ಪ್ರಕರಣಗಳ ಕುರಿತಂತೆ ತಮ್ಮ ಹೆಸರು ಉಲ್ಲೇಖ ಮಾಡಿರುವುದಕ್ಕೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ವಕೀಲರಿಗೆ ಯಾವುದಾದರೂ ಅಹವಾಲು ಇದ್ದಿದ್ದರೆ ಅವರು ನೇರವಾಗಿ ನನ್ನ ಮುಂದೆ ವಿಚಾರ ಪ್ರಸ್ತಾಪ ಮಾಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರನ್ನು ಉಲ್ಲೇಖಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಮಾಡಿರುವ ನಿರ್ಣಯ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಈ ಠರಾವಿನ ಬಗ್ಗೆ ಸ್ವತಃ ನ್ಯಾಯಮೂರ್ತಿ ಕೆ. ನಟರಾಜನ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನ್ಯಾಯಾಲಯದ ಮುಕ್ತ ಕಲಾಪದ ವೇಳೆ ಎಎಬಿ ನಿರ್ಣಯದ ಬಗ್ಗೆ ಪ್ರಸ್ತಾಪಿಸಿರುವ ನ್ಯಾಯಮೂರ್ತಿ ನಟರಾಜನ್ ಅವರು, ಠರಾವನ್ನು ಸಾಮಾಜಿಕ ಮಾಧ್ಯಮದಲ್ಲಿ ಗಮನಿಸಿದೆ. ದೆಹಲಿ ನ್ಯಾಯಮೂರ್ತಿಯೊಬ್ಬರ ಮನೆಯಲ್ಲಿ ಅಪಾರ ಮೊತ್ತದ ನಗದು ದೊರೆತ ಪ್ರಕರಣದ ಜೊತೆಗೆ ನನ್ನ ಹೆಸರನ್ನೂ ಉಲ್ಲೇಖ ಮಾಡಲಾಗಿದೆ. ಇದರ ಅಗತ್ಯವೇನಿತ್ತು? ಇದು ನ್ಯಾಯಾಲಯದ ವರ್ಚಸ್ಸಿಗೆ ಹಾನಿಯುಂಟು ಮಾಡುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಬೆಂಗಳೂರು ವಕೀಲರ ಸಂಘ(ಎಎಬಿ) ಅಧ್ಯಕ್ಷರಿಗೆ ದೂರು ನೀಡಿರುವ ವಕೀಲರು ಮುಂದೆ ಬಂದು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳನ್ನು ಬಿಡುಗಡೆ ಮಾಡುವಂತೆ ಕೋರಬಹುದು. ಎಲ್ಲ ಪ್ರಕರಣಗಳನ್ನು ನಾನೇಕೆ ಇಟ್ಟುಕೊಳ್ಳಲಿ. ಈ ಬಗ್ಗೆ ನಿರ್ಣಯ ಕೈಗೊಂಡಿರುವುದು ಅಸಮರ್ಪಕ ಕ್ರಮ ಎಂದು ತಿಳಿಸಿದರು.

‘ನಾನು ಇನ್ನೂ ಒಂದು ತಿಂಗಳ ಕಾಲ ಕಲಬುರಗಿ ಪೀಠದಲ್ಲೇ ಕಾರ್ಯ ನಿರ್ವಹಿಸಬೇಕಿದೆ. ಏತನ್ಮಧ್ಯೆ, ಬೇಸಿಗೆ ರಜೆ ಬರುವ ಕಾರಣ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ, ಸಕಾರಣಗಳಿಂದ ನನ್ನ ಮುಂದೆ ಭಾಗಶಃ ವಿಚಾರಣೆಗೆ ಒಳಪಟ್ಟಿರುವ ಪ್ರಕರಣಗಳ ವಿಚಾರಣೆಯನ್ನು ಮುಂದುವರಿಸಲು ಆಗದು. ಅವುಗಳನ್ನು ನನ್ನಿಂದ ಬಿಡುಗಡೆ ಮಾಡುವುದೇ ಸೂಕ್ತ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

‘ಭಾಗಶಃ ವಿಚಾರಣೆ ಅಲಿಸಿರುವ ಪ್ರಕರಣಗಳನ್ನು ನಾನೇ ವಿಚಾರಣೆ ನಡೆಸಬೇಕು ಎಂದು ವಕೀಲರು ಬಯಸಿದರೂ ಎಎಬಿ ಠರಾವು ಪಾಸು ಮಾಡಿರುವ ಹಿನ್ನೆಲೆಯಲ್ಲಿ ನನಗೆ ಆ ಪ್ರಕರಣಗಳ ವಿಚಾರಣೆ ನಡೆಸುವ ಇಚ್ಛೆ ಇಲ್ಲ. ಯಾವುದೇ ವಕೀಲರಿಗೆ ಸಮಸ್ಯೆ ಇದ್ದರೆ ಅವರು ಲಿಖಿತವಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿ, ಆ ಪ್ರಕರಣವನ್ನು ಪುನಃ ನನ್ನ ಮುಂದೆ ಪಟ್ಟಿ ಮಾಡಲು ಕೋರಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

ತಮ್ಮ ನ್ಯಾಯಾಲಯದಲ್ಲಿ ಸುಮಾರು 16,000 ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯಮೂರ್ತಿಯೊಬ್ಬರು ನಿವೃತ್ತರಾದ ಕಾರಣ ಅವರ ನ್ಯಾಯಾಲಯದಲ್ಲಿ ಇದ್ದ 5000 ಪ್ರಕರಣಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಪ್ರಕರಣವನ್ನು ಐದೇ ನಿಮಿಷದಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲು ಸಾಧ್ಯವೇ..? ಹಿರಿಯ ವಕೀಲರು ತಾಸುಗಟ್ಟಲೆ ವಾದಿಸುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಕಚೇರಿ ಸಮಯ ಮೀರಿ ನಾನು ಪ್ರಕರಣಗಳ ವಿಚಾರಣೆ ನಡೆಸುತ್ತೇನೆ ಎಂದು ನ್ಯಾ. ನಟರಾಜನ್ ಅವರು ತಿಳಿಸಿದ್ದಾರೆ.

‘ಪ್ರಕರಣವೊಂದರಲ್ಲಿ ಎಎಬಿ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಅವರ ತಂದೆ ಪದಾಂಕಿತ ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಭಾಗಿಯಾಗಿದ್ದ ಪ್ರಕರಣದಲ್ಲಿ ಭಾಗಶಃ ವಿಚಾರಣೆ ನಡೆಸಿರುವುದನ್ನೂ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ’ ಎಂದೂ ಅವರು ಈ ಕುರಿತಂತೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದರು.

ಈ ಪ್ರಕರಣ ಬಹುತೇಕ ವಿಚಾರಣೆ ನಡೆಸಲಾಗಿದೆ. ಕೆ.ಎನ್. ಸುಬ್ಬಾರೆಡ್ಡಿ ಅವರ ಪುತ್ರ ಎಎಬಿ ಅಧ್ಯಕ್ಷರಾಗಿದ್ದಾರೆ. ಅವರೇ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣ ಬಿಡುಗಡೆ ಸಂಬಂಧ ನಿರ್ಣಯ ಪಾಸ್ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣದ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ನ್ಯಾ. ನಟರಾಜನ್ ಆದೇಶ ಹೊರಡಿಸಿದ್ದಾರೆ.
ಏನಿದು ವಿವಾದ..

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.