ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಕ್ರಿಮಿನಲ್ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು: ಹಿಂದೂ ದೇವತೆಗಳನ್ನು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಧಕ್ಕೆ ತಂದ ಆರೋಪದಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
‘ಭಜರಂಗಿ ಗೋ ಕಳ್ಳರು’ ಹೆಸರಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಅದರಲ್ಲಿ, ಹಿಂದೂ ದೇವತೆಗಳನ್ನು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ‘ನನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕುಪ್ಪೆಟ್ಟಿ ಕರಾಯ ಗ್ರಾಮದ ಸಿರಾಜುದ್ದೀನ್ ಬಿನ್ ಮೊಹಮದ್ ಇಸ್ಮಾಯಿಲ್ (30) ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
ಈ ಕ್ರಿಮಿನಲ್ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲವನ್ನೂ ಸಹಿಸಲಾಗುವುದಿಲ್ಲ. ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಾಮರಸ್ಯ ಭಂಗಗೊಳಿಸುವ ಪ್ರವೃತ್ತಿ ಕಂಡು ಬರುತ್ತಿದೆ. ತನಿಖಾಧಿಕಾರಿಯು ಗ್ರೂಪ್ ನ ಎಲ್ಲಾ ನಿರ್ವಾಹಕರ ವಿರುದ್ಧ ಏಕರೂಪವಾಗಿ ಮುಂದುವರಿಯಲು ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ’ ಕಿಡಿಕಾರಿದೆ.
‘ಗ್ರೂಪ್ನ ವ್ಯಾಪ್ತಿ ಮತ್ತು ಅದರ ಅಡ್ಮಿನ್ ಹೊಣೆಗಾರಿಕೆಗಳೆಲ್ಲವೂ ನೇರವಾಗಿ ಡೊಮೇನ್ ಗೆ ಸೇರುವ ವಿಷಯಗಳಾಗಿವೆ. ಹಾಗಾಗಿ, ಇಂತಹ ವಾಟ್ಸ್ ಆ್ಯಪ್ ಗ್ರೂಪ್ ಗಳ ಸದಸ್ಯರು ಅಶ್ಲೀಲ ಚಿತ್ರಗಳ ಪ್ರಸರಣಕ್ಕೆ ಅವಕಾಶ ನೀಡುವ ಕುಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕು. ಆದಾಗ್ಯೂ, ತನಿಖಾ ಹಂತದಲ್ಲಿ ಈ ಕೋರ್ಟ್ ಯಾವುದೇ ಹೆಚ್ಚಿನ ಅವಲೋಕನ ಮಾಡುವುದು ಅನಗತ್ಯ. ಈ ರೀತಿಯ ಗುರುತರ ಗುಣಲಕ್ಷಣಗಳ ಅಪರಾಧದ ತನಿಖೆಯನ್ನು ಮಧ್ಯದಲ್ಲೇ ತಡೆಯಲು ಸಾಧ್ಯವಿಲ್ಲ. ಅಂತೆಯೇ, ಅಪರಾಧವು ಐದು ವರ್ಷಗಳಷ್ಟು ಹಳೆಯದಾಗಿರುವ ಕಾರಣ ತನಿಖಾಧಿಕಾರಿ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಮುಕ್ತಾಯಗೊಳಿಸಬೇಕು’ ಎಂದು ನ್ಯಾಯಪೀಠವು ಪ್ರಾಸಿಕ್ಯೂಷನ್ ಗೆ ಸೂಚಿಸಿತು.
ಏನಿದು ಪ್ರಕರಣ…
‘ಆರೋಪಿ ಸಿರಾಜುದ್ದೀನ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಅಶ್ಲೀಲವಾಗಿ, ಅವಮಾನಕರ ಮತ್ತು ಅಪವಿತ್ರ ರೀತಿಯಲ್ಲಿ ಚಿತ್ರಿಸಿ ಪ್ರಸಾರ ಮಾಡುತ್ತಿದ್ದಾನೆ. ಈ ರೀತಿಯ ವಾಟ್ಸ್ ಆ್ಯಪ್ ಗ್ರೂಪ್ ಗಳು ಸಮಾಜದಲ್ಲಿ ಗಲಭೆ ಸೃಷ್ಟಿಸುವ ಷಡ್ಯಂತ್ರ ಹೊಂದಿದ್ದು, ಕೋಮು ಹಿಂಸಾಚಾರ ಈ ಗ್ರೂಪ್ ಗಳ ಗುರಿಯಾಗಿದೆ. ಆದ್ದರಿಂದ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಬೆಳ್ತಂಗಡಿಯ ಕಡಿರುದ್ಯಾವರ ಗ್ರಾಮದ ಕೆ.ಜಯರಾಜ್ ಸಾಲಿಯಾನ 2020ರ ಜನವರಿ 25ರಂದು ಸೆನ್ (ಸೈಬರ್, ಎಕನಾಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ) ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಮಂಗಳೂರು ಪೊಲೀಸರು, ಭಾರತೀಯ ದಂಡ ಸಂಹಿತೆ-1860ರ ಕಲಂ 295(ಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ ಕಲಂ 67ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದರು. ‘ಎಫ್ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಜೆಎಂಎಫ್ಸಿ ಕೋರ್ಟ್ ನಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು. ಇದೀಗ ಹೈಕೋರ್ಟ್ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.
ಐಪಿಸಿ 295 (ಎ) ಪ್ರಕಾರ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರ್ವಕವಾಗಿ ಅವಮಾನಿಸುವ ಮೂಲಕ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೃತ್ಯಗಳನ್ನು ಶಿಕ್ಷಿಸುತ್ತದೆ. ಇದು ದ್ವೇಷ ಭಾಷಣದ ಕಠಿಣ ಕಾನೂನಾಗಿದ್ದು ಅಪರಾಧಿಗಳಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ವಿಷಯ ಪ್ರಸಾರ ಮಾಡುವುದನ್ನು ತಡೆಯಲು ಬಳಸಲಾಗುವ ಪ್ರಮುಖ ಕಾನೂನು ಎನಿಸಿದ ಐಟಿ ಕಾಯ್ದೆಯ ಕಲಂ 67, ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಿಷಯಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ. ಈ ಅಪರಾಧಕ್ಕೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದನ್ನೇ ಪುನರಾವರ್ತಿಸಿದರೆ 5 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದೇ ಕಾಯ್ದೆಯ ಕಲಂ 67ಎ ಮತ್ತು 67ಬಿ ಮಕ್ಕಳ ಲೈಂಗಿಕ ಮತ್ತು ಅಶ್ಲೀತೆಗೆ ಅನ್ವಯವಾಗುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
