ಬೇಕಾಬಿಟ್ಟಿ ವರ್ಗಾವಣೆ: ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ
ಬೆಂಗಳೂರು: ಹುದ್ದೆ ನಿಯೋಜಿಸದೆ ವರ್ಗಾವಣೆ ಮಾಡಿ ಅಧಿಕಾರಿಗಳನ್ನು ಅತಂತ್ರಗೊಳಿಸುವ ಈ ಮೂಲಕ ಬೇಕಾಬಿಟ್ಟಿ ವರ್ಗಾವಣೆ ಮಾಡುವ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಅಬಕಾರಿ ಉಪ ಆಯುಕ್ತರಾಗಿದ್ದ ಅರುಣ್ ಕುಮಾರ್ ಅವರನ್ನು ಯಾವುದೇ ಹುದ್ದೆ ನೀಡದೆ ವರ್ಗಾವಣೆಗೊಳಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಅಧಿಕಾರಿಗಳಿಗೆ ಜವಾಬ್ದಾರಿ ನೀಡದೆ ಅವರನ್ನು ಹಳೆಯ ಹುದ್ದೆಯಿಂದ ಬಿಡುಗಡೆ ಮಾಡುವುದು ಸರಿಯಲ್ಲ. ಇದು ತೆರಿಗೆದಾರರ ಹಣದ ವ್ಯವಸ್ಥಿತ ದುರ್ಬಳಕೆ ಎಂದು ಕಿಡಿಕಾರಿದೆ.
ಅಲ್ಲದೆ ಯಾವುದೇ ಅಧಿಕಾರಿಯನ್ನು ಹೊಸ ಜವಾಬ್ದಾರಿ ನೀಡುವ ತನಕ ಹಳೆಯ ಪೋಸ್ಟಿಂಗ್ ನಿಂದ ಬಿಡುಗಡೆ ಮಾಡುವಂತಿಲ್ಲ. ಒಂದು ವೇಳೆ ಬಿಡುಗಡೆ ಮಾಡಿದರೆ, ಅವರು ಕೆಲಸ ಮಾಡದೆ ಮನೆಯಲ್ಲಿ ಕುಳಿತ ಅವಧಿಯ ವೇತನ ಮತ್ತು ಭತ್ಯೆಯನ್ನು ವರ್ಗಾವಣೆ ಆದೇಶ ನೀಡಿದ ಸಂಬಂಧಪಟ್ಟ ಕಾರ್ಯದರ್ಶಿ ಅಥವಾ ಇಲಾಖಾ ಮುಖ್ಯಸ್ಥರ ವೇತನದಿಂದಲೇ ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.
ಏನಿದು ಪ್ರಕರಣ..
ಬೆಳಗಾವಿ ಉತ್ತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾಗಿದ್ದ ಅರುಣ್ ಕುಮಾರ್ ಅವರನ್ನು 2025ರ ಜ.29ರಂದು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಎಸ್.ಸ್ವಪ್ನಾ ಎಂಬುವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ, ಅರುಣ್ ಕುಮಾರ್ ಅವರಿಗೆ ಹೊಸ ಜವಾಬ್ದಾರಿ ನೀಡದೆ, ಕೇವಲ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಿಕೊಳ್ಳಿ ಎಂದು ಸೂಚಿಸಲಾಗಿತ್ತು. ಅಂದಿನಿಂದ ಒಂದು ವರ್ಷ ಅವರು ಹುದ್ದೆ ಇಲ್ಲದೆ ಅರುಣ್ ಕುಮಾರ್ ಕಾಯುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಇದನ್ನು ಪ್ರಶ್ನಿಸಿ ಅವರು ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ಆಡಳಿತಾತ್ಮಕ ನ್ಯಾಯಮಂಡಳಿ ತಿರಸ್ಕರಿಸಿತ್ತು.
ಹೀಗಾಗಿ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಅರುಣ್ ಕುಮಾರ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳದೆ ವೇತನ ನೀಡುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ ಎಂದು ಹೇಳಿತು. ನ್ಯಾಯಾಲಯದ ನಿರ್ದೇಶನದಂತೆ ಅರುಣ್ ಕುಮಾರ್ ಅವರಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಉಪ ಆಯುಕ್ತರಾಗಿ ಹುದ್ದೆ ನೀಡಿ ಕಳೆದ ಜನವರಿ 12ರಂದು ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಹುದ್ದೆ ನೀಡದೆ ವರ್ಗಾವಣೆ ನಡೆಸದಂತೆ ಆದೇಶಿಸಿದೆ.
ಕಾರ್ಯದರ್ಶಿಗಳಿಗೆ ಈ ತೀರ್ಪಿನ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ರವಾನಿಸಲು ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶಿಸಿತು. ಅಲ್ಲದೆ ಇದನ್ನು ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದು ನ್ಯಾಯಪೀಠವು ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
