20/05/2025

Law Guide Kannada

Online Guide

ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಕುರಿತು ಹೈಕೋರ್ಟ್ ಮಹತ್ವದ ತೀರ್ಪು: ಸರ್ಕಾರಕ್ಕೆ ಮುಖಭಂಗ

ಬೆಂಗಳೂರು: ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯಿದೆ-2023ರ ಯ ಸೆಕ್ಷನ್ 128(ಚಿ)ಗೆ ತಿದ್ದುಪಡಿ ಮಾಡಿ ಸಹಕಾರ ಸಂಘಗಳ ಸಿಬ್ಬಂದಿ ನೇಮಕ ಮತ್ತು ವರ್ಗಾವಣೆ ಅಧಿಕಾರವನ್ನು ಕಿತ್ತುಕೊಂಡಿದ್ದ ಸರ್ಕಾರ ಹೈಕೋರ್ಟ್ ನಲ್ಲಿ ಮುಖಭಂಗವಾಗಿದೆ.

ಸಹಕಾರ ಸಂಘಗಳ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಕಾಯಿದೆಯ ಸೆಕ್ಷನ್ 128(ಚಿ)ಗೆ ತಿದ್ದುಪಡಿ ಮಾಡಿರುವುದು ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯಿದೆ-2023ರ ಯ ಸೆಕ್ಷನ್ 128(ಚಿ)ಗೆ ತಿದ್ದುಪಡಿ ಮಾಡಿದ್ದ ಸರ್ಕಾರದ ಆದೇಶದ ವಿರುದ್ಧ ದಕ್ಷಿಣ ಕನ್ನಡದ ಉಪ್ಪಿನಂಗಡಿ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಹೈಕೋರ್ಟ್ ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಸಿಬ್ಬಂದಿ ನೇಮಕ ಮತ್ತು ವರ್ಗಾವಣೆಯಲ್ಲಿ ಸಹಕಾರ ಸಂಘಗಳಿಗೆ ಇರುವ ಅಧಿಕಾರವನ್ನು ಸರ್ಕಾರ ತೆಗೆದುಕೊಂಡರೆ ಆಗ ಅದು ರಾಜಕೀಯಕ್ಕೆ ಕಾರಣವಾಗುತ್ತದೆ. ಇದು ಸಹಕಾರ ಸಂಘಗಳ ಕಾರ್ಯನಿರ್ವಣೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತಿದ್ದುಪಡಿ ರದ್ದುಗೊಳಿಸಬೇಕು ಮತ್ತು ಸಿಬ್ಬಂದಿ ನೇಮಕದ ಮೇಲಿನ ಸ್ವಾತಂತ್ರ್ಯವನ್ನು ಆಯಾ ಸಂಘಗಳಿಗೆ ಬಿಟ್ಟುಕೊಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಸಹಕಾರ ಸಂಘಗಳ ನೇಮಕಾತಿ ವೃಂದ ರಚನೆ. ನೇಮಕಾತಿ, ನೌಕರರ ವರ್ಗಾವಣೆ ಮತ್ತು ಅವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವನ್ನು ಸಹಕಾರ ಸಂಘಗಳಿಂದ ಮೊಟಕುಗೊಳಿಸಿ ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವುದು ಸಂವಿಧಾನ ಬಾಹಿರ ಎಂದು ಮಹತ್ವದ ತೀರ್ಪು ನೀಡಿದೆ.

ಜನರೇ ಸಹಕಾರ ಚಳವಳಿಯ ಜೀವಾಳ. ಜನರಿಗಾಗಿ ರಚಿಸಿಕೊಂಡಿರುವ ಸಂಘಗಳೇ ಸಹಕಾರ ಸಂಘಗಳು. ಇದರಲ್ಲಿ ಸರ್ಕಾರ ಸೇರಿದಂತೆ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಹಾಗೊಂದು ವೇಳೆ ಈ ರೀತಿ ಮಧ್ಯಪ್ರವೇಶ ಮಾಡಿದರೆ ಆಗ ಅದು ಸಂವಿಧಾನದ ಕಲಂ 19(ಛಿ)ಯ ಉಲ್ಲಂಘನೆ ಆಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.