07/03/2026

Law Guide Kannada

Online Guide

ಗೃಹ ಖರೀದಿದಾರರ ಹಿತರಕ್ಷಣೆ : ವಸತಿಯೂ ಮೂಲಭೂತ ಹಕ್ಕು ಎಂದ ಸುಪ್ರೀಂ

ಬೆಂಗಳೂರು: ಗೃಹ ಖರೀದಿದಾರರ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪೋಂದನ್ನು ನೀಡಿದ್ದು ಭಾರತೀಯ ಸಂವಿಧಾನದ ಕಲಂ 21 ರಡಿ ವಸತಿಯೂ ಮೂಲಭೂತ ಹಕ್ಕು ಎಂದು ಸಾರಿದೆ.

ಬಿಲ್ಡರ್ ಗಳ ವಿರುದ್ಧ ದಿವಾಳಿ ಸಂಹಿತೆಯಡಿ ಕ್ರಮ ಜರುಗಿಸುವಂತೆ ಕೋರಿ ಗೃಹ ಖರೀದಿದಾರರು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ಪ್ರಾಧಿಕಾರ (ಓಅಐಂಖಿ)ದ ಆದೇಶ ಪ್ರಶ್ನಿಸಿ ಮಾನಸಿ ಬ್ರಾರ್ ಫೆರ್ನಾಂಡೀಸ್ ಮತ್ತು ಶುಭಾ ಶರ್ಮ ಸೇರಿ ಹಲವು ಬಿಲ್ಡರ್ಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾ.ಪಿ.ಬಿ. ಪರ್ದಿವಾಲಾ ಮತ್ತು ನ್ಯಾ.ಆರ್.ಮಹದೇವನ್ ಅವರಿದ್ದ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. ಅಲ್ಲದೆ, ಕೇಂದ್ರ ಸರಕಾರ ಸಂಕಷ್ಟದಲ್ಲಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸಲು ಆರ್ಥಿಕ ನೆರವು ಒದಗಿಸಲು ‘ಪುನಃಶ್ಚೇತನ ನಿಧಿ’ ಸ್ಥಾಪನೆ ಮಾಡುವಂತೆಯೂ ನಿರ್ದೇಶನ ನೀಡಿದೆ.

ಈ ಆದೇಶದ ಪ್ರತಿಯನ್ನು ಕೇಂದ್ರ ಸಂಪುಟ ಕಾರ್ಯದರ್ಶಿ ಮತ್ತು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಲುಪಿಸಿ ಅದನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕೆಂದು ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶಿಸಿದೆ. ನಿಜವಾದ ಗೃಹ ಖರೀದಿದಾರರು ಭಾರತದ ಭವಿಷ್ಯದ ನಗರವಾಸಿಗಳ ಬೆನ್ನೆಲುಬಾಗಿದ್ದು, ಅವರ ರಕ್ಷಣೆ ಸಾಂವಿಧಾನಿಕ ಕರ್ತವ್ಯ ಮತ್ತು ಆರ್ಥಿಕ ನೀತಿಯೂ ಆಗಿದೆ. ಈ ನಿರ್ದೇಶನಗಳ ಮೂಲಕ ನ್ಯಾಯಾಲಯ ನಿಯಂತ್ರಣ ಮತ್ತು ದಿವಾಳಿ ಸಂಹಿತೆ ಚೌಕಟ್ಟಿನಲ್ಲಿ ವಿಶ್ವಾಸವನ್ನಿರಿಸಿ ದುರ್ಬಳಕೆ ತಡೆಗಟ್ಟಬೇಕಿದೆ ಮತ್ತು ಆ ಮೂಲಕ ಭಾರತೀಯ ಪ್ರಜೆಗಳ ಸ್ವಂತ ಸೂರಿನ ಕನಸು ‘ಜೀವನಮಾನವಿಡೀ ದುಃಸ್ವಪ್ನ’ವಾಗದಂತೆ ಖಾತ್ರಿಪಡಿಸಿಕೊಳ್ಳಬೇಕಿದೆ,” ಎಂದು ನ್ಯಾಯಪೀಠ ಹೇಳಿದೆ.

ಗೃಹ ಖರೀದಿದಾರರ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಇದೇ ತೀರ್ಪಿನಲ್ಲಿ ಮತ್ತೊಂದು ನಿರ್ದೇಶನ ನೀಡಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ ಪ್ರತಿಯೊಂದು ವಸತಿ ಯೋಜನೆಯನ್ನೂ ಸ್ಥಳೀಯ ಪ್ರಾಧಿಕಾರಗಳಲ್ಲಿ ನೋಂದಾಯಿಸಬೇಕು ಮತ್ತು ಬಿಲ್ಡರ್ ವಸತಿ ಯೋಜನೆಯ ಒಟ್ಟು ವೆಚ್ಚದ ಶೇ.20ರಷ್ಟನ್ನು ಪ್ರಾಧಿಕಾರಕ್ಕೆ ಮೊದಲೇ ಪಾವತಿಸಬೇಕು ಎಂದು ಸೂಚನೆ ನೀಡಿದೆ.

”ಬಹುತೇಕ ಗೃಹ ಖರೀದಿ ಒಪ್ಪಂದಗಳು ಮಾದರಿ ರೇರಾ ಒಪ್ಪಂದ ನಿಯಮಗಳಿಗೆ ವಿರುದ್ಧವಾಗಿರುತ್ತವೆ. ಹಾಗಾಗಿ, ಗೃಹ ಖರೀದಿದಾರರು 50 ವರ್ಷದ ಅಸುಪಾಸಿನವರಾದರೆ ನಿಯಮಗಳಲ್ಲಿ ಬೈ ಬ್ಯಾಕ್ ಅಂಶ ಸೇರ್ಪಡೆ ಮಾಡಬೇಕು ಮತ್ತು ಸಕ್ಷಮ ಪ್ರಾಧಿಕಾರದ ಮುಂದೆ ಖರೀದಿದಾರರು ಏನೇ ಅಪಾಯ ಎದುರಾದರೂ ಅದನ್ನು ಎದುರಿಸಲು ಸಿದ್ಧನೆಂದು ಪ್ರಮಾಣಪತ್ರ ಸಲ್ಲಿಸಬೇಕು,” ಎಂದು ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.