ಗೃಹಿಣಿಯ ಮನೆ ಕೆಲಸವೂ ಆರ್ಥಿಕ ಚಟುವಟಿಕೆ, ಮೌಲ್ಯಯುತ: ಅವರನ್ನೂ ಅಪಘಾತ ಪರಿಹಾರದಲ್ಲಿ ಪರಿಗಣಿಸಿ- ಸುಪ್ರೀಂ ಕೋರ್ಟ್
ನವದೆಹಲಿ: ಗೃಹಿಣಿಯರು ಮನೆಯಲ್ಲಿ ಮಾಡುವ ಕೆಲಸವೂ ಆರ್ಥಿಕ ಚಟುವಟಿಕೆಯಾಗಿದೆ. ಅವರ ಹಣ ರಹಿತ ಸೇವೆ ಮೌಲ್ಯಯುತವಾದ್ದದ್ದು. ಹೀಗಾಗಿ ಅವರನ್ನೂ ಅಪಘಾತ ಪರಿಹಾರದಲ್ಲಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಪಘಾತ ಪ್ರಕರಣದಲ್ಲಿ ವಿಮಾ ಕಂಪನಿಯು ಪರಿಹಾರವನ್ನು ನಿಗದಿ ಮಾಡುವಾಗ ಗೃಹಿಣಿ, ಪತ್ನಿಯು ಮನೆಯಲ್ಲಿ ಸಲ್ಲಿಸುವ ವೇತನ ರಹಿತ ಸೇವೆಯನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಪೀಠವು, ಗೃಹಿಣಿ ಮನೆಯಲ್ಲಿ ಮಾಡುವ ಕೆಲಸವು ಗಂಡಸರು ಹೊರಗೆ ಕಛೇರಿಗಳಲ್ಲಿ ಮಾಡುವ ಕೆಲಸದ ಮೌಲ್ಯಯುತವಾದದ್ದು. ಗೃಹಿಣಿಯರ ಮನೆ ಕೆಲಸಕ್ಕೆ ವೇತನ ಪಡೆಯುವುದಿಲ್ಲವೆಂದ ಮಾತ್ರಕ್ಕೆ, ನಿರುಪಯುಕ್ತ, ಮೌಲ್ಯವಿಲ್ಲದ ಕೆಲಸವೆಂದು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಗೃಹಿಣಿಯರು ಮನೆಯಲ್ಲಿ ಮಾಡುವ ಕೆಲಸಗಳನ್ನು ಸೇವೆಯೆಂದು ಪರಿಗಣಿಸಿ, ಕಾಲ್ಪನಿಕ ಆದಾಯವನ್ನು ನಿಗದಿಪಡಿಸಿ ಪರಿಹಾರವನ್ನು ಘೋಷಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
2014ರ ಏಪ್ರಿಲ್ ನಲ್ಲಿ ದಂಪತಿ ಬೈಕ್ ನಲ್ಲಿ ತೆರಳುತ್ತಿರಬೇಕಾದರೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿ ಇಬ್ಬರೂ ಸ್ಥಳದಲ್ಲಿಯೇ ಮೃತರಾಗುತ್ತಾರೆ. ಗಂಡ ಶಿಕ್ಷಕರಾಗಿದ್ದು ಹೆಂಡತಿ ಗೃಹಿಣಿ ಯಾಗಿ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಗಂಡನ ಆದಾಯವನ್ನು ಮಾತ್ರ ಪರಿಗಣಿಸಿ ಮೃತನ ತಂದೆ ಮತ್ತು ದಂಪತಿಗಳ ಇಬ್ಬರು ಹೆಣ್ಣು ಮಕ್ಕಳಿಗೆ ಪರಿಹಾರವಾಗಿ ವಿಮಾ ಕಂಪನಿ ರೂ 11.20 ಲಕ್ಷಗಳ ಚೆಕ್ಕನ್ನು ನೀಡುತ್ತದೆ. ಇದನ್ನು ಪ್ರಶ್ನಿಸಿ ಕೆಳಹಂತದ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟಿನವರೆಗೂ ಮನವಿ ಸಲ್ಲಿಸಲಾಗಿತ್ತು.
ಮನವಿದಾರರು ತಮ್ಮ ಮನವಿಯಲ್ಲಿ ಎತ್ತಿರುವ ತಕರಾರೆಂದರೆ, ವಿಮಾ ಕಂಪನಿಯು ಪರಿಹಾರ ನಿರ್ಧರಿಸುವಾಗ ಕೇವಲ ಪತಿಯು ಪಡೆಯುತ್ತಿದ್ದ ವೇತನದ ಆಧಾರದ ಮೇಲೆ ನಿಗದಿಪಡಿಸಿದೆಯೇ ಹೊರತು, ಪತ್ನಿ (ಗೃಹಿಣಿ) ಮನೆಯಲ್ಲಿ ಸಲ್ಲಿಸುವ ವೇತನ ರಹಿತ ಸೇವೆಯನ್ನು ಪರಿಗಣಿಸಿಲ್ಲ. ವೇತನ ಪಡೆಯದಿದ್ದ ಮಾತ್ರಕ್ಕೆ ಗೃಹಿಣಿಯರು ಸಲ್ಲಿಸುವ ಸೇವೆಯನ್ನು ಪರಿಹಾರದ ಮೊತ್ತವನ್ನು ನಿಗದಿಪಡಿಸುವಾಗ ಪರಿಗಣಿಸದಿರುವುದು ನ್ಯಾಯ ಸಮ್ಮತವಲ್ಲ. ಆದುದರಿಂದ ಗೃಹಿಣಿಯು ಮನೆಯಲ್ಲಿ ಸಲ್ಲಿಸುವ ಸೇವೆಯನ್ನೂ ಪರಿಗಣಿಸಿ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.
ವಾದ ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಪರಿಹಾರದ ಮೊತ್ತವನ್ನು ರೂ 11.20 ಲಕ್ಷದಿಂದ ಇಂದ ರೂ 33.20 ಲಕ್ಷಕ್ಕೇರಿಸಿ ತೀರ್ಪುಪ್ರಕಟಿಸಿತು. ಇದರ ಜೊತೆಗೆ 2014 ರಿಂದ ಶೇಕಡ 9 ರಷ್ಟು ಬಡ್ಡಿಯನ್ನೂ ಎರಡು ತಿಂಗಳೊಳಗಾಗಿ ಪಾವತಿಸಲು ಆಜ್ಞಾಪಿಸಿತು. ಗೃಹಿಣಿಯರ ಕೆಲಸ, ಶ್ರಮ ಮತ್ತು ತ್ಯಾಗಕ್ಕನುಗುಣವಾಗಿ ಕಾಲ್ಪನಿಕ ಆದಾಯವನ್ನು ನಿಗದಿಪಡಿಸಬೇಕು ಎಂದೂ ಸಹ ಅದು ಅಜ್ಞಾಪಿಸಿತು.
2011ರ ಜನಗಣತಿ ಪ್ರಕಾರ ಭಾರತದಲ್ಲಿ 159.85 ಮಿಲಿಯನ್ ಮಹಿಳೆಯರು “ಗೃಹಕೃತ್ಯ” (household work) ತಮ್ಮ ಮುಖ್ಯ ಉದ್ಯೋಗವೆಂದು ಘೋಷಿಸಿಕೊಂಡಿದ್ದಾರೆ. ಆದರೆ ಕೇವಲ 5.79 ಪುರುಷರು ಗೃಹಕೃತ್ಯ ತಮ್ಮ ಮುಖ್ಯ ಉದ್ಯೋಗವೆಂದು ಘೋಷಿಸಿಕೊಂಡಿದ್ದಾರೆ. NSO (National Statistical Office) ವರದಿ ಪ್ರಕಾರ ಹೆಂಗಸರು ಪ್ರತಿದಿನ ಸರಾಸರಿ 299 ನಿಮಿಷಗಳನ್ನು ವೇತನ ರಹಿತ ಮನೆ ಕೆಲಸದಲ್ಲಿ ತೊಡಗಿದ್ದರೆ, ಗಂಡಸರು ಕೇವಲ 97 ನಿಮಿಷಗಳನ್ನು ಮಾತ್ರ ವೇತನ ರಹಿತ ಮನೆಕೆಲಸದಲ್ಲಿ ತೊಡಗಿರುತ್ತಾರೆ.
ಗೃಹಿಣಿ ಮನೆಯಲ್ಲಿ ಮಾಡುವ ಕೆಲಸಗಳು ಹಲವಾರು. ಇಡೀ ಕುಟುಂಬಕ್ಕೆ ಆಹಾರ ತಯಾರಿಕೆ, ಅಂಗಡಿಯಿಂದ ಮನೆಗೆ ಬೇಕಾದ ಸಾಮಾನುಗಳನ್ನು ತರುವುದು, ಮನೆಯನ್ನು ಸ್ವಚ್ಛಗೊಳಿಸುವುದು. ಮಕ್ಕಳನ್ನು ಹಾಗೂ ವಯೋವೃದ್ಧರನ್ನು ಪೋಷಿಸುವುದು, ಗ್ರಾಮೀಣ ಪ್ರದೇಶದಲ್ಲಾದರೆ ಮನೆಯಲ್ಲೂ ದುಡಿದು, ದನ ಕರುಗಳನ್ನು ಪೊಷಿಸುವುದರ ಜೊತೆಗೆ ಹೊಲ ಗದ್ದೆಗಳಲ್ಲಿ ಪುರುಷರ ಜೊತೆಯಲ್ಲಿ ಸರಿಸಮಾನವಾಗಿದುಡಿಯುವುದು, ಹೀಗೆ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಈ ಯಾವ ಕೆಲಸಗಳಿಗೂ ಅವರು ವೇತನ ಪಡೆಯುವುದಿಲ್ಲ. ಅದೇ ಪುರುಷ ಹೊರಗಡೆ ಕಛೇರಿಗಳಲ್ಲಿ ಮಾಡಿದ ಕೆಲಸಗಳಿಗೆ ವೇತನ ಪಡೆಯುತ್ತಾನೆ. ಗೃಹಿಣಿಯರು ಮಕ್ಕಳ ಹಾಗೂ ಹಿರಿಯರ ಪಾಲನೆ ಪೋಷಣೆಗೆ ದಿನಕ್ಕೆ ಸರಾಸರಿ 134 ನಿಮಿಷಗಳನ್ನು ಮೀಸಲಾಗಿಟ್ಟರೆ ಪುರುಷರು ಕೇವಲ 76 ನಿಮಿಷಗಳನ್ನು ಈ ಕೆಲಸಗಳಿಗೆ ಮೀಸಲಾಗಿಟ್ಟಿದ್ದಾರೆ.
ಗೃಹಿಣಿ ತನ್ನ ಸೇವೆಗಳಿಗೆ ವೇತನ ಪಡೆಯುವುದಿಲ್ಲವೆಂದ ಮಾತ್ರಕ್ಕೆ ಮೌಲ್ಯರಹಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಅವಳ ಅತ್ಯಮೂಲ್ಯವಾದ ಸೇವೆಯಿಂದ ಮಾತ್ರ ಸಂಸಾರ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದರು.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಗೃಹಿಣಿಯರ ಪಾತ್ರ ಬಹಳ ಮುಖ್ಯವಾದದ್ದು. ಅವರು ಸಲ್ಲಿಸುವ ಸೇವೆಯನ್ನೂ “ಆರ್ಥಿಕ ಚಟುವಟಿಕೆ” ಎಂದು ಪರಿಗಣಿಸಿ ಕಾಲ್ಪನಿಕ ಆದಾಯವನ್ನು ನಿಗದಿ ಪಡಿಸಿದ ನಂತರ ಪರಿಹಾರದ ಮೊತ್ತವನ್ನು ನಿರ್ಧರಿಸಬೇಕು. ಇದರಿಂದ ಸಾಮಾಜಿಕ ಸಮಾನತೆ ಹಾಗೂ ಮಹಿಳೆಯರ ಘನತೆ ಗೌರವವನ್ನು ಕಾಪಾಡಿದಂತಾಗುತ್ತದೆ. ಇದು ನಮ್ಮ ಸಂವಿಧಾನದ ಆಶಯವೂ ಹೌದು ಎಂದು ನ್ಯಾಯಪೀಠ ತೀರ್ಪು ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
