ರೌಡಿಶೀಟ್ ಹೇಗೆ, ಏಕೆ ತೆರೆಯುತ್ತಾರೆ ಪೊಲೀಸರು..? ಇಲ್ಲಿದೆ ನೋಡಿ ಮಾಹಿತಿ..
ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಪೊಲೀಸರು ರೌಡಿ ಶೀಟ್ ತೆರೆಯುತ್ತಾರೆ. ಹಾಗಾದರೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟ ಹೇಗೆ ತೆರೆಯುತ್ತಾರೆ..? ಮತ್ತು ಏಕೆ ತೆರೆಯುತ್ತಾರೆ. ಈ ಹಣೆಪಟ್ಟಿಯ ಬಗ್ಗೆ ಅಮಾಯಕರಿಗೆ ರಕ್ಷಣೆ ಸಿಗುತ್ತಾ ಎಂಬ ಪ್ರಶ್ನೆಗಳಿಗೆ ಕರ್ನಾಟಕ ಹೈಕೋರ್ಟ್ ಉತ್ತರ ನೀಡಿದ್ದು ರೌಡಿ ಶೀಟ್ ಸಂಬಂಧ ಕೆಲ ಮಾರ್ಗಸೂಚಿಗಳನ್ನ ಪ್ರಕಟಿಸಿದೆ.
ಅಪರಾಧ ಪ್ರಕರಣಗಳಲ್ಲಿ ತಮಗೆ ಶಿಕ್ಷೆಯಾಗದಿದ್ದರೂ ತಮ್ಮ ವಿರುದ್ಧ ಪೊಲೀಸರು ರೌಡಿಶೀಟ್ ತೆಗೆದಿದ್ದಾರೆ, ನಮ್ಮ ಹಕ್ಕನ್ನು ಉಲ್ಲಂಘಿಸಲಾಗಿದೆ. ನಮ್ಮ ವಿರುದ್ಧದ ರೌಡಿಶೀಟ್ನ್ನು ರದ್ದುಪಡಿಸಬೇಕು ಎಂದು ಕೋರಿ 19 ರೌಡಿಗಳು ಹೈಕೋರ್ಟ್ಗೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ರೌಡಿಶೀಟ್ ತೆರೆಯುವ ಬಗ್ಗೆ ಹೊಸ ಮಾರ್ಗಸೂಚಿಯನ್ನು ಹೈಕೋರ್ಟ್ ಪ್ರಕಟಿಸಿದೆ. ಅಪರಾಧ ಪ್ರಕ್ರಿಯೆಗಳಲ್ಲಿ ಸಕ್ರಿಯರಾಗಿರುವ ರೌಡಿಗಳ ವಿರುದ್ಧ ರೌಡಿಶೀಟ್ ತೆರೆಯುವ ವಿಚಾರದಲ್ಲಿ ಹೊಸ ನಿಯಮಗಳನ್ನು ಅಳವಡಿಸಿರುವ ಮಾರ್ಗಸೂಚಿಯನ್ನು ರೂಪಿಸಿದೆ.
ಒಬ್ಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗದಿದ್ದರೂ ನ್ಯಾಯಾಲಯದಿಂದ ಯಾವುದೇ ಶಿಕ್ಷೆಗೆ ಗುರಿಯಾಗದ ಸಂದರ್ಭದಲ್ಲೂ ಅವರ ವಿರುದ್ಧ ರೌಡಿಶೀಟ್ ತೆರೆಯಬಹುದು. ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಅಪರಾಧ ಪ್ರಕರಣಗಳಿಂದ ಖುಲಾಸೆಯಾಗಿರುವ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎಂಬುದು ಸರಿಯಲ್ಲ. ರೌಡಿ ಆಗಿದ್ದವರು ಭವಿಷ್ಯದಲ್ಲೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ರೌಡಿಶೀಟ್ ಆರಂಭಿಸುವುದೇ ರೌಡಿಗಳ ಅಪರಾಧ ಕೃತ್ಯಗಳ ಮೇಲೆ ನಿಗಾ ಇಡಲು. ಆದ್ದರಿಂದ ರೌಡಿ ಶೀಟ್ ತೆಗೆಯುವುದು ನ್ಯಾಯಸಮ್ಮತವಾದ ನಿರ್ಬಂಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ರೌಡಿಶೀಟ್ ತೆರೆಯುವ ಮುನ್ನ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿಗಳನ್ನ ರೂಪಿಸಿರುವ ಹೈಕೋರ್ಟ್, ರೌಡಿ ಶೀಟ್ ತೆರೆಯುವ ಮತ್ತು ರೌಡಿ ಪಟ್ಟಿಯಿಂದ ಹೆಸರು ಕೈಬಿಡುವ ವಿಚಾರಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು. ಕಾನೂನು ರೂಪಿಸುವವರೆಗೆ ಈ ಮಾರ್ಗಸೂಚಿಗಳನ್ನ ಪೊಲೀಸ್ ಇಲಾಖೆ ಪಾಲಿಸಬೇಕು. ನಾಗರಿಕ ಸಮಾಜದಲ್ಲಿ ರೌಡಿ ಚಟುವಟಿಕೆಗಳಿಗೆ ಅವಕಾಶ ಇರಬಾರದು. ರೌಡಿಗಳನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಹೈಕೋರ್ಟ್ ಪ್ರಕಟಿಸಿರುವ ಮಾರ್ಗಸೂಚಿ ಅಂಶಗಳು ಈ ಕೆಳಕಂಡಂತಿದೆ…
• ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಮತ್ತು ನಿಖರ ಮಾಹಿತಿ ಹೊಂದಿರಬೇಕು. ಆಗ ಮಾತ್ರ ರೌಡಿಶೀಟ್ ತೆರೆಯಬಹುದು.
• ಒಬ್ಬ ವ್ಯಕ್ತಿ ವಿರುದ್ಧ ರೌಡಿಶೀಟ್ ಆರಂಭಿಸಬೇಕಿದ್ದರೆ ಆ ವ್ಯಕ್ತಿಗೆ ಮುಂಚಿತವಾಗಿ ನೋಟೀಸ್ ಜಾರಿಗೊಳಿಸಿ, ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಬೇಕು.
• ರೌಡಿ ಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ ನೀಡಬೇಕು.
• ರೌಡಿ ಶೀಟ್ ಹಾಕದಂತೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು.
• ಜಿಲ್ಲೆಯಲ್ಲಿ ಪೊಲೀಸ್ ಉಪ ವರಿಷ್ಠಾಧಿಕಾರಿ ಮತ್ತು ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ರೌಡಿಶೀಟ್ ತೆಗೆಯಲು ಆದೇಶ ಹೊರಡಿಸಬೇಕು.
• ಎರಡು ವರ್ಷಕ್ಕೊಮ್ಮೆ ರೌಡಿಶೀಟ್ನ್ನು ಮರುಪರಿಶೀಲನೆ ನಡೆಸಿ ಸಮಗ್ರ ಲಿಖಿತ ಆದೇಶ ಹೊರಡಿಸಬೇಕು.
• ರೌಡಿಶೀಟ್ ತೆರೆದ ನಂತರ ಈ ಬಗ್ಗೆ ಯಾವುದೇ ತಕರಾರು ಇದ್ದರೆ ಬಾಧಿತ ವ್ಯಕ್ತಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
