ಅಪರೂಪದ ಸಂದರ್ಭ ಹೊರತುಪಡಿಸಿ ಗಂಡನ ಜಾತಿ ಪತ್ನಿಗೆ ವರ್ಗಾವಣೆ ಆಗುವುದಿಲ್ಲ – ಹೈಕೋರ್ಟ್
ಬೆಂಗಳೂರು: ಅಪರೂಪದ ಸಂದರ್ಭದಲ್ಲಿ ಮಾತ್ರ ಮಹಿಳೆಯು ತನ್ನ ಗಂಡನ ಜಾತಿಯ ಸ್ಥಾನಮಾನ ಪಡೆಯುತ್ತಾಳೆ. ಮದುವೆಯ ಕಾರಣಕ್ಕೆ ಗಂಡನ ಜಾತಿಯು ಪತ್ನಿಗೆ ವರ್ಗಾವಣೆ ಆಗುವುದಿಲ್ಲ. ಅದರಲ್ಲೂ ಚುನಾವಣಾ ವಿಚಾರಗಳಲ್ಲಿ ಇಂತಹ ಅಂಶಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಗಂಡನ ಜಾತಿಯನ್ನೇ ನನ್ನ ಜಾತಿಯಾಗಿ ಪರಿಗಣಿಸಿಲ್ಲ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಗೆದ್ದಿದ್ದರೂ ತನ್ನ ಆಯ್ಕೆಯನ್ನು ಅಸಿಂಧುಗೊಳಿಸಲಾಗಿದೆ ಎಂದು ಆಕ್ಷೇಪಿಸಿ ಶಿವಮೊಗ್ಗದ ಎಂ.ಜಿ ಅರ್ಚನಾ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಾಮಾನ್ಯವಾಗಿ ತಂದೆಯ ಜಾತಿಯು ಮಕ್ಕಳಿಗೆ ಬರುತ್ತದೆ. ಅಪರೂಪದ ಸಂದರ್ಭಗಳಲ್ಲಿ ಪತಿಯ ಜಾತಿಯ ಸ್ಥಾನಮಾನ ವಿವಾಹದ ಬಳಿಕ ಸಾಮಾಜಿಕವಾಗಿ ಅಂಗೀಕರಿಸುವ ಮೂಲಕ ಮಹಿಳೆಗೆ ಬರುತ್ತದೆ. ಆದರೆ, ವಿವಾಹದ ಮೂಲಕ ಪತಿಯ ಸಮುದಾಯಕ್ಕೆ ಸೇರಿದ್ದೇನೆ ಎಂದಾಕ್ಷಣ ಗಂಡನ ಜಾತಿಯು ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಅದರಲ್ಲೂ ಚುನಾವಣಾ ವಿಚಾರಗಳಲ್ಲಿ ಇಂತಹ ಅಂಶಗಳನ್ನು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಮಹಾಭಾರತದ “ದೈವ ಯತ್ನಂ ಕುಲೇ ಜನ್ಮ… ಪುರುಷ ಯತ್ನಂ ಪೌರುಷಂ” ಎಂಬ ಉದ್ದರಣೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಸಾಮಾನ್ಯವಾಗಿ ತಂದೆಯ ಜಾತಿ ಮಕ್ಕಳಿಗೆ ಬರುತ್ತದೆ. ಅಪರೂಪದ ಸಂದರ್ಭದಲ್ಲಿ ಮಾತ್ರ ಪತಿಯ ಜಾತಿಯ ಸ್ಥಾನಮಾನ ವಿವಾಹವಾದ ಬಳಿಕ ಸಾಮಾಜಿಕವಾಗಿ ಅಂಗೀಕರಿಸುವ ಮೂಲಕ ಮಹಿಳೆಗೆ ಬರುತ್ತದೆ ಎಂದು ತೀರ್ಪಿನಲ್ಲಿ ಹೇಳಿದೆ.
ಹಾಗೆಯೇ ಜ್ಯೋತಿ ಬಸು ಗಿs ದೇಬಿ ಪ್ರಸಾದ್ ಘೋಷಲ್ (AIR 1982 SC 983) ಪ್ರಕರಣವನ್ನು ಅವಲಂಬಿಸಿದ. ಪ್ರತಿವಾದಿ ಪರ ವಕೀಲರು, ಚುನಾವಣಾ ವಿಚಾರದಲ್ಲಿ ಸಾಮಾನ್ಯ ಕಾನೂನನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು. ಅಲ್ಲದೆ, ಪಕ್ಷಕಾರರಾದ ಮಹಿಳೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಅವರೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಎಂದು ನ್ಯಾಯಪೀಠ ವಿಶ್ಲೇಷಿಸಿತು.
ಅಪರೂಪದ ಸಂದರ್ಭದಲ್ಲಿ ಮಾತ್ರ ಮಹಿಳೆಯು ಗಂಡನ ಜಾತಿಯ ಸ್ಥಾನಮಾನ ಪಡೆಯುತ್ತಾಳೆ. ವಿವಾಹವಾದ ಬಳಿಕ ಸಾಮಾಜಿಕವಾಗಿ ಅಂಗೀಕರಿಸುವ ಮೂಲಕ ಮಹಿಳೆ ಗಂಡನ ಸಮುದಾಯಕ್ಕ ಸೇರುತ್ತಾರೆ. ಆದರೆ, ಇಂತಹ ತತ್ವವನ್ನು ಚುನಾವಣಾ ವಿಚಾರಗಳಲ್ಲಿ ಪರಿಗಣಿಸಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿತು.
ಜಾತಿ ಪ್ರಮಾಣಪತ್ರದ ಲೋಪದ ಕುರಿತಂತೆ ನೀಡಿದ್ದ ದೂರಿನ ವಿಚಾರಣೆ ವೇಳೆ ತನಗೆ ವಾದ ಮಂಡಿಸಲು ಅವಕಾಶ ನೀಡಿಲ್ಲ ಎಂದು ಅರ್ಚನಾ ವಾದಿಸಿದ್ದಾರೆ. ಆದರೆ, ಹಲವು ಅವಕಾಶ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯ ಉದಾರತೆಯನ್ನುತೋರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು.
ಏನಿದು ಪ್ರಕರಣ…?
ಹುಟ್ಟಿನಿಂದ ಪರಿಶಿಷ್ಟ ಜಾತಿಗೆ ಸೇರಿರುವ ಎಂಜಿ ಅರ್ಚನಾ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಬಳಿಕ ಇವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಅಭಿಲಾಷ ಎಂಬುವರು ಪ್ರಕರಣ ದಾಖಲಿಸಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಹುದ್ದೆಗೆ ಪರಿಶಿಷ್ಟ ಜಾತಿಗೆ ಸೇರಿದ ಅರ್ಚನಾ ಸ್ಪರ್ಧಿಸಿದ್ದು ನಿಯಮಬಾಹಿರ ಎಂದಿದ್ದರು. ಅರ್ಜಿ ಪುರಸ್ಕರಿಸಿದ್ದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಅರ್ಚನಾ ಆಯ್ಕೆ ಅನೂರ್ಜಿತಗೊಳಿಸಿ 2022ರ ಫೆ.1ರಂದು ಆದೇಶಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಚನಾ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದೇನೆ. ಎಸ್ಟಿ ಸಮುದಾಯದ ವ್ಯಕ್ತಿ ಮದುವೆಯಾಗಿರುವುದರಿಂದ ಪತಿಯ ಸಾಮಾಜಿಕ ಸ್ಥಾನಮಾನವನ್ನು ಹೊಂದಿದ್ದೇನೆ. ಇದರಿಂದಾಗಿ ಪತಿಯ ಜಾತಿ ತನಗೂ ಅನ್ವಯಿಸುತ್ತದೆ ಎಂದು ವಾದಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
