ಪತ್ನಿ ಮಕ್ಕಳಿಗೆ ಜೀವನಾಂಶ ನೀಡುವುದು ಪತಿಯ ಶಾಸನ ಬದ್ಧ ಕರ್ತವ್ಯ- ಹೈಕೋರ್ಟ್
ಕೇರಳ: ವೈವಾಹಿಕ ವ್ಯಾಜ್ಯ ಪ್ರಕರಣಗಳಲ್ಲಿ ಜೀವನಾಂಶ ಕೋರುವ ತನ್ನ ಹಕ್ಕನ್ನು ಪತ್ನಿಯು ಪತಿಯೊಂದಿಗಿನ ಒಪ್ಪಂದದ ಮೂಲಕ ತ್ಯಜಿಸಿದ್ದರೂ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ (ಡಿವಿ ಕಾಯ್ದೆ) – 2005 ರ ಅಡಿಯಲ್ಲಿ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ತನ್ನ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡುವುದು ಪತಿಯ ಶಾಸನ ಬದ್ಧ ಕರ್ತವ್ಯ. ಇದನ್ನು ಯಾವುದೇ ಒಪ್ಪಂದದಿಂದ ತಪ್ಪಿಸಲಾಗದು. ಪತ್ನಿಯನ್ನು ಜೀವನಾಂಶ ಪಡೆಯುವ ಹಕ್ಕಿನಿಂದ ವಂಚಿತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಸಕ್ತ ಪ್ರಕರಣದಲ್ಲಿ ಪತಿ ಪತ್ನಿ ನಡುವೆ ನೋಟರಿ ಒಪ್ಪಂದ ನಡೆದಿದ್ದು ಪತ್ನಿಯು ಜೀವನಾಂಶ ನಿರಾಕರಣೆ ಮಾಡಿದ್ದರು. ಆದರೆ, ಪತ್ನಿಯ ಕಾನೂನುಬದ್ಧ ಜೀವನಾಂಶದ ಹಕ್ಕನ್ನು ನಿರಾಕರಿಸಲು ಪ್ರಯತ್ನಿಸುವ ಪತಿ ಮತ್ತು ಪತ್ನಿಯ ನಡುವಿನ ಯಾವುದೇ ಒಪ್ಪಂದವು ಮಾನ್ಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ನೀಡಿದ್ದ ಹಲವು ತೀರ್ಪುಗಳನ್ನು ಉಲ್ಲೇಖಿಸಿದ್ದ ನ್ಯಾಯಪೀಠ, ಕಾನೂನು ಬದ್ಧ ಜೀವನಾಂಶ ಪಡೆಯುವ ಹಕ್ಕನ್ನು ನಿರಾಕರಿಸುವ ಯಾವುದೇ ಒಪ್ಪಂದ ಮಾನ್ಯವಾಗುವುದಿಲ್ಲ. ಈ ಅಂಶದ ಕುರಿತ ಕಾನೂನು ನಿಲುವು ಸ್ಪಷ್ಟವಾಗಿದೆ. ವೈವಾಹಿಕ ವ್ಯಾಜ್ಯ ಪ್ರಕರಣಗಳಲ್ಲಿ ಜೀವನಾಂಶ ಕೋರುವ ತನ್ನ ಹಕ್ಕನ್ನು ಪತ್ನಿಯು ಒಪ್ಪಂದದ ಮೂಲಕ ತ್ಯಜಿಸಿದ್ದರೂ, ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯ್ದೆ (ಡಿವಿ ಆಕ್ಟ್) ಪತ್ನಿಯ ಜೀವನಾಂಶ ಪಡೆಯುವ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದಿಲ್ಲ ಎಂದು ನ್ಯಾಯಪೀಠ ತೀರ್ಪು ಹೇಳಿದೆ.
ಕೋರ್ಟ್ ಮುಂದೆ ಸಲ್ಲಿಸಿದ ರಾಜಿಯ ಭಾಗವಾಗಿ ಅಥವಾ ಯಾವುದೇ ಇತರ ರೀತಿಯಲ್ಲಿ ಪತ್ನಿ ಮತ್ತು ಪತಿಯ ನಡುವೆ ಒಪ್ಪಂದವಾದಾಗ, ಭವಿಷ್ಯದಲ್ಲಿ ಪತಿಯಿಂದ ಜೀವನಾಂಶ ಪಡೆಯುವುದಿಲ್ಲ ಎಂದು ಪತ್ನಿ ತನ್ನ ಜೀವನಾಂಶದ ಹಕ್ಕು ತ್ಯಾಗ ಮಾಡುತ್ತಾಳೆ. ಇಂತಹ ಒಪ್ಪಂದವು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
