ಬೇರೆ ಜಾತಿ, ಧರ್ಮದದವರನ್ನ ಮದುವೆಯಾದ್ರೆ ಮಗಳಿಗೆ ತಂದೆ ಆಸ್ತಿಯಲ್ಲಿ ಪಾಲಿಲ್ವಾ? ಸುಪ್ರೀಂ ಕೊಟ್ಟ ತೀರ್ಪೇನು?
ನವದೆಹಲಿ: ಬೇರೆ ಧರ್ಮದ ಯುವಕನನ್ನು ಮದುವೆಯಾಗಿ ಬಳಿಕ ತನ್ನ ತಂದೆ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್ ಮೊರೆ ಹೋಗಿದ್ದ ಮಹಿಳೆಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಕೋರ್ ಬೇರೆ ಜಾತಿ, ಧರ್ಮದದವರನ್ನ ಮದುವೆಯಾಗುವ ಮಗಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಶೈಲಾ ಜೋಸೆಫ್ ಎಂಬುವವರು ಬೇರೆ ಧರ್ಮದ ಯುವಕನನ್ನ ಮದುವೆಯಾಗಿ ತನ್ನ ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್ ಮೊರೆ ಹೋಗಿದ್ದರು.
ಈ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ನ್ಯಾಯ ಪೀಠವು ಈ ತೀರ್ಪು ಪ್ರಕಟಿಸಿದ್ದು, ಮಗಳು ಅಪ್ಪನ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಅಥವಾ ಬೇರೆ ಧರ್ಮದವನನ್ನು ಮದುವೆಯಾದರೆ ಆಕೆಗೆ ಅಪ್ಪನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಸಮುದಾಯದ ಹೊರಗೆ ಮದುವೆಯಾದರೆ ಅಥವಾ ಮಗಳು ಅಪ್ಪನಿಗೆ ನೋವುಂಟಾಗುವಂತೆ ವರ್ತಿಸಿದರೆ ಆ ತಂದೆ ತನ್ನ ಮಗಳನ್ನು ಆಸ್ತಿಯ ವಿಲ್ನಿಂದ ಹೊರಗಿಡಬಹುದು. ಇದರಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯವು ಶೈಲಾ ಜೋಸೆಫ್ ಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ತೀರ್ಪನ್ನು ರದ್ದುಗೊಳಿಸಿದೆ.
ಆ ಮಹಿಳೆ ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಹೀಗಾಗಿ, ಶ್ರೀಧರನ್ ತನ್ನ ಮಗಳನ್ನು ದೂರವೇ ಇಟ್ಟಿದ್ದರು. ತಮ್ಮ ವಿಲ್ ನಲ್ಲಿ ಕೂಡ ಆಕೆಗೆ ಪಾಲು ಬರೆದಿರಲಿಲ್ಲ. ಇದನ್ನು ವಿರೋಧಿಸಿ, ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಆಕೆ ಕಾನೂನು ಮೊರೆಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಆ ವಿಲ್ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿ ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಅವರ ಇತರ 8 ಸಹೋದರರೊಂದಿಗೆ ಸಮಾನ ಪಾಲು ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ಈ ತೀರ್ಪನ್ನು ರದ್ದುಗೊಳಿಸಿದೆ. ವಿಲ್ ಪ್ರಕಾರ ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದು ಆಕೆಯ ತಂದೆ ಸ್ವಇಚ್ಛೆಯಿಂದ ಬರೆದಿರುವ ವಿಲ್. ಇದರಲ್ಲಿ ಯಾವುದೇ ಹಸ್ತಕ್ಷೇಪ ಸಾಧ್ಯವಿಲ್ಲ. ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಲಾಗಿದೆ. ಶೈಲಾ ತನ್ನ ತಂದೆಯ ಆಸ್ತಿಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಎಲ್ಲ ಆಸ್ತಿಯನ್ನೂ ಆಕೆಯ ತಂದೆಯ ಇಚ್ಛೆಯ ಪ್ರಕಾರವೇ ಆಕೆಯ ಇತರ ಸಹೋದರರಿಗೆ ಉಯಿಲು (ವಿಲ್) ಮೂಲಕ ನೀಡಲಾಗಿದೆ ಎಂದು ನ್ಯಾಯಪೀಠವು ಹೇಳಿದೆ.
ಹಾಗೆಯೇ ಲಿಂಗ ಸಮಾನತೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಆ ಪ್ರಕಾರ ಹೇಳುವುದಾದರೆ ಮಹಿಳೆಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಆದರೆ, ಈ ಪ್ರಕರಣದಲ್ಲಿ ವಿಲ್ ಬರೆದ ವ್ಯಕ್ತಿಯ ಇಚ್ಛೆ ಮುಖ್ಯವಾಗಿದೆ. ಅವರೇನಾದರೂ ವಿಲ್ ಬರೆಯದೇ ಇದ್ದಿದ್ದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಪಾಲು ಇರುತ್ತಿತ್ತು. ಆದರೆ, ಅವರು ಮಗಳಿಗೆ ಆಸ್ತಿ ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ವಿಲ್ ಬರೆದಿರುವುದರಿಂದ ಮತ್ತು ಇದು ಅವರ ಕೊನೆಯ ವಿಲ್ ಆಗಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಿರುತ್ತದೆ. ಕಾನೂನು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
