20/05/2025

Law Guide Kannada

Online Guide

ಕ್ರಿಮಿನಲ್ ಕೇಸ್ ಇದ್ರೆ ಉದ್ಯೋಗಕ್ಕೆ ಅನರ್ಹ, ಪ್ರಜಾಪ್ರತಿನಿಧಿಗಳಾಗಲು ಮಾತ್ರ ಅರ್ಹ ಅದು ಹೇಗೆ..? ಸುಪ್ರೀಂ ಕೋರ್ಟ್

ನವದೆಹಲಿ: ಕ್ರಿಮಿನಲ್ ಕೇಸ್ ಇರುವ ವ್ಯಕ್ತಿ ಉದ್ಯೋಗಕ್ಕೆ ಅನರ್ಹ, ಆದರೆ ಆತ ಪ್ರಜಾಪ್ರತಿನಿಧಿಗಳಾಗಲು ಮಾತ್ರ ಅರ್ಹನಾಗುತ್ತಾನೆ. ಇದು ಹೇಗೆ..? ಈ ವಿಚಾರದಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವವರು ಸಂಸತ್ತು ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ಶಾಶ್ವತವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸಂಬಂಧ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರ ಅಭಿಪ್ರಾಯ ಕೇಳಿದೆ.

ಹಾಗೆಯೇ ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗ (ಇಅI) ತಮ್ಮ ಪ್ರತಿಕ್ರಿಯೆಯನ್ನು ಮೂರು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ. ತಮ್ಮ ವಾದಗಳನ್ನು ಮಂಡಿಸಲು ಬಯಸುವ ರಾಜ್ಯ ಸರ್ಕಾರಗಳಿಗೂ ಸಹ ಅವಕಾಶ ನೀಡಲಾಗುವುದು. ಪ್ರಕರಣದ ಎಲ್ಲಾ ಭಾಗೀದಾರರು ಸಮಯಕ್ಕೆ ಸರಿಯಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದರೆ ಅವರ ವಾದ ಆಲಿಸುವುದಾಗಿ ಹೇಳಿದ ಸುಪ್ರೀಂಕೋರ್ಟ್ ನ್ಯಾಯಪೀಠ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಲಾಗಿದೆ.

2023 ರಲ್ಲಿ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಸಂಸದರು ಮತ್ತು ಶಾಸಕರ ವಿರುದ್ಧದ ತ್ವರಿತ ವಿಚಾರಣೆಯ ಅಂಶದ ಕುರಿತು ಸಮಗ್ರ ತೀರ್ಪು ನೀಡಿತ್ತು.

ಪ್ರಜಾ ಪ್ರಾತಿನಿಧ್ಯ ಕಾಯಿದೆಯ (ಆರ್ಪಿ ಕಾಯ್ದೆ) ಸೆಕ್ಷನ್ 8 ಮತ್ತು 9 ರ ಕೆಲವು ವಿಷಯಗಳ ಸಿಂಧುತ್ವ ಪ್ರಶ್ನಿಸಿ, ಮತ್ತು ಅಂತಹ ಜನಪ್ರತಿನಿಧಿಗಳಿಗೆ ನಿಷೇಧ ವಿಧಿಸುವಂತೆ ಕೋರಿ ವಕೀಲ ಮತ್ತು ಹೋರಾಟಗಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು 2017ರಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಸಂಸತ್ ಸದಸ್ಯರಾಗಿ ಅಥವಾ ಶಾಸಕರಾಗಿ ನಿರ್ದಿಷ್ಟ ಅವಧಿಗೆ ಮಾತ್ರ ಸ್ಪರ್ಧಿಸುವುದರಿಂದ ಅನರ್ಹಗೊಳಿಸುವ ಈ ನಿಬಂಧನೆಗಳ ಸಿಂಧುತ್ವವನ್ನು ಉಪಾಧ್ಯಾಯ ಪ್ರಶ್ನಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.