ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೇ ಅದು ಅತ್ಯಾಚಾರವಲ್ಲ – ಸುಪ್ರೀಂಕೋರ್ಟ್

ನವದೆಹಲಿ : ಮಹಿಳೆ ತಾನು ಪ್ರೀತಿಸುತ್ತಿರುವ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿತು.
ಒಬ್ಬ ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆ, ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ. ಆ ಮಹಿಳೆ ತನ್ನ ಒಪ್ಪಿಗೆಯೊಂದಿಗೆ 16 ವರ್ಷಗಳ ಕಾಲ ಆತನೊಂದಿಗೆ ಇದ್ದರು. ಆದರೆ ಆರೋಪಿಯು ತನಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಉನ್ನತ ಶಿಕ್ಷಣ ಪಡೆದ ಮಹಿಳೆಯೊಬ್ಬರು ಒಂದು ದಶಕಕ್ಕೂ ಹೆಚ್ಚು ಕಾಲ ಲೈಂಗಿಕ ಕಿರುಕುಳದ ದೂರು ದಾಖಲಿಸಲಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಆಶ್ಚರ್ಯಪಟ್ಟಿತು.
ಮಾರ್ಚ್ 3 ರಂದು ನೀಡಿದ ತೀರ್ಪಿನಲ್ಲಿ, ಆರೋಪಿಗೆ ಮೊದಲಿನಿಂದಲೂ ಮದುವೆಯಾಗುವ ಉದ್ದೇಶವಿರಲಿಲ್ಲ ಎಂದು ಸಾಬೀತಾಗದ ಹೊರತು, ಮದುವೆಯ ಭರವಸೆಯನ್ನು ಈಡೇರಿಸಲು ವಿಫಲವಾದರೆ ಅದು ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಬೇರೊಬ್ಬಳನ್ನು ಮದುವೆಯಾದ ನಂತರ ಮಹಿಳೆ ಎಫ್ಐಆರ್ ದಾಖಲಿಸಿದ್ದಾರೆ. ಹೀಗಾಗಿ ದೂರಿನ ಹಿಂದೆ ಸೇಡಿನ ಭಾವನೆ ಇರುವಂತೆ ಕಾಣುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
2022 ರಲ್ಲಿ, ಆರೋಪಿಗಳ ವಿರುದ್ಧ ಉತ್ತರ ಪ್ರದೇಶದ ಇಟಾವಾದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 2006 ರಲ್ಲಿ, ಆರೋಪಿಗಳು ರಾತ್ರಿಯಲ್ಲಿ ತನ್ನ ಮನೆಗೆ ನುಗ್ಗಿ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದರು. ಬಳಿಕ ಆ ನಂತರವೂ ಅವರ ನಡುವಿನ ಸಂಬಂಧ ಮುಂದುವರೆದಿದೆ ಎಂದು ದೂರುದಾರರು ಆರೋಪಿಸಿದ್ದರು. ಈ ಸಂಬಂಧ ಅಲಹಾಬಾದ್ ಹೈಕೋರ್ಟ್ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತ್ತು, ಇದನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ತಮ್ಮ ಸಂಬಂಧ ಸಂಪೂರ್ಣವಾಗಿ ಒಪ್ಪಿಗೆಯಿಂದ ಕೂಡಿತ್ತು. ಆ ಮಹಿಳೆಯೊಂದಿಗಿನ ಸಂಬಂಧ ಹಳಸಿ ತಾನು ಬೇರೆ ಮಹಿಳೆಯನ್ನು ಮದುವೆಯಾದಾಗ, ಆಕೆ ಸುಳ್ಳು ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದಾಳೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ