ಇಂಗ್ಲೀಷ್ ಕಷ್ಟವಾದ್ರೆ, ಕನ್ನಡದಲ್ಲಿಯೇ ವಾದ ಮಂಡಿಸಿ: ನ್ಯಾ. ಪ್ರದೀಪ್ ಸಿಂಗ್ ಯೆರೂರ್

ಬೆಂಗಳೂರು: ಕಿರಿಯ ವಕೀಲರಿಗೆ ಇಂಗ್ಲೀಷ್ ನಲ್ಲಿ ವಾದ ಮಂಡಿಸಲು ಕಷ್ಟವಾದರೆ, ಕನ್ನಡದಲ್ಲಿಯೇ ವಾದ ಮಂಡಿಸಿ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಹೇಳಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಏಪ್ರಿಲ್ 9 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್, ‘ಎಲ್ಲ ವಕೀಲರಿಗೂ ಇಂಗ್ಲೀಷ್ ಭಾಷೆಯಲ್ಲಿ ವಾದ ಮಂಡಿಸಲು ಸಾಧ್ಯವಾಗಲ್ಲ. ಕಿರಿಯ ವಕೀಲರು ಇಂಗ್ಲೀಷ್ ಭಾಷೆಯಲ್ಲಿ ವಾದ ಮಂಡಿಸಲು ಕಷ್ಟ ಪಡುತ್ತಾರೆ. ಹೀಗಾಗಿ ನನ್ನ ನ್ಯಾಯಾಲಯದಲ್ಲಿ ಇಂಗ್ಲೀಷ್ ಬದಲು ಕನ್ನಡದಲ್ಲಿಯೇ ವಾದ ಮಂಡಿಸಬಹುದು ಎಂದರು.
ವಕೀಲ ವೃತ್ತಿಯಲ್ಲಿ ಇಂಗ್ಲಿಷ್ ಭಾಷೆಯು ಬಹುಮಟ್ಟಿಗೆ ಪ್ರಾಮುಖ್ಯತೆಯನ್ನ ಪಡೆದಿದ್ದು, ನ್ಯಾಯಾಲಯದ ದಾಖಲೆಗಳು, ವಾದ-ವಿವಾದಗಳು ಹಾಗೂ ನ್ಯಾಯಾಧೀಶರ ತೀರ್ಪುಗಳು ಬಹುತೇಕ ಇಂಗ್ಲಿಷ್ನಲ್ಲಿ ನಡೆಯುತ್ತವೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಿಂದ ಬಂದ ಅಥವಾ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ವಕೀಲರಿಗೆ ಕೆಲವೊಂದು ಪ್ರಮುಖ ಅಡಚಣೆಗಳು ಎದುರಾಗುತ್ತವೆ. ಆ ಅಡಚಣೆಗಳೇನು ಗೊತ್ತೆ..
ಭಾಷೆ ಅರ್ಥಮಾಡಿಕೊಳ್ಳುವ ಸಮಸ್ಯೆ.
ಕಾನೂನು ಶಾಸ್ತ್ರದಲ್ಲಿ ಬಳಸುವ ಇಂಗ್ಲಿಷ್ ಪದಗಳು ಹೆಚ್ಚು ತಾಂತ್ರಿಕವಾಗಿರುತ್ತವೆ. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಹಲವಾರು ಕನ್ನಡ ಹಿನ್ನಲೆ ವಕೀಲರಿಗೆ ಸವಾಲಾಗಿ ಪರಿಣಮಿಸುತ್ತದೆ.
ಅನುಭವ ಮತ್ತು ಅಭ್ಯಾಸದ ಕೊರತೆ..
ಇಂಗ್ಲಿಷ್ ಭಾಷೆಯ ವಾದ ಮಂಡನೆಗೆ ಬೇಕಾದ ತರಬೇತಿ ಅಥವಾ ಸಾಂದರ್ಭಿಕ ಬಳಕೆಯ ಅನುಭವ ಬಹುತೇಕ ಲಭ್ಯವಿರುವುದಿಲ್ಲ. ಹೀಗಾಗಿ ವಕೀಲರು ತಮ್ಮ ಕೌಶಲ್ಯವನ್ನು ತೋರಿಸಲು ಸಾಧ್ಯವಾಗುವುದಿಲ್ಲ ಅನುಭವ ಅಭ್ಯಾಸದ ಕೊರತೆಯಿಂದಾಗಿ ಇಂಗ್ಲೀಷ್ ನಲ್ಲಿ ವಾದ ಮಂಡಿಸಲು ಕೆಲ ವಕೀಲರಿಗೆ ಕಷ್ಟವಾಗಬಹುದು. ಆದರೆ ಇಂಗ್ಲೀಷ್ ನಲ್ಲಿ ವಾದ ಮಂಡನೆ ಅಭ್ಯಾಸ ಮಾಡುತ್ತಾ ಅನುಭವ ಪಡೆದುಕೊಂಡರೆ ಇಂತಹ ಸಮಸ್ಯೆಗಳು ಬರುವುದಿಲ್ಲ.
ಹಾಗೆಯೇ ನ್ಯಾಯಾಲಯದಲ್ಲಿ ತ್ವರಿತವಾಗಿ ಮತ್ತು ನಿಖರವಾಗಿ ವಾದ ಮಂಡನೆ ಮಾಡಬೇಕಾಗುತ್ತದೆ. ಇಂಗ್ಲಿಷ್ನಲ್ಲಿ ನೈಜವಾಗಿ ತಮ್ಮ ಯುಕ್ತಿಗಳನ್ನು ಪ್ರಸ್ತಾಪಿಸುವಲ್ಲಿ ಬಹುತೆಕ ವಕೀಲರಿಗೆ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಭಾಷಾ ಅಡಚಣೆ ಅವರ ತರ್ಕಬದ್ಧ ಚಿಂತನೆ ಮತ್ತು ಪರಿಣಾಮಕಾರಿಯಾದ ವಾದ ಮಂಡನೆಗೆ ಅಡೆತಡೆಯಾಗುತ್ತದೆ, ಇದರಿಂದ ನ್ಯಾಯ ಪಡೆಯುವ ಪ್ರಕ್ರಿಯೆ ಕೊಂಚ ಅಸಮರ್ಪಕವಾಗಬಹುದು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ