12/03/2026

Law Guide Kannada

Online Guide

ಆದಾಯದ ಆಧಾರದ ಮೇಲೆ OBC ‘ಕ್ರೀಮಿ ಲೇಯರ್’ ನಿರ್ಧಾರ ಕಾನೂನುಬಾಹಿರ -ಸುಪ್ರೀಂ ಕೋರ್ಟ್

ನವದೆಹಲಿ: ಒಬ್ಬ ಅಭ್ಯರ್ಥಿಯು ಕ್ರೀಮಿ ಲೇಯರ್‌ಗೆ ಸೇರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕೇವಲ ಅವರ ಕುಟುಂಬದ ವಾರ್ಷಿಕ ಆದಾಯದ ಆಧಾರದ ಮೇಲೆ ನಿರ್ಧರಿಸುವುದು “ಕಾನೂನುಬಾಹಿರ ಮತ್ತು ಅಸಮರ್ಥನೀಯ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ಈ ಕುರಿತು ವಿಸ್ತೃತವಾಗಿ ಚರ್ಚಿಸಿ ಈ ತೀರ್ಪು ಪ್ರಕಟಿಸಿದೆ. ಒಬಿಸಿ ‘ಕ್ರೀಮಿ ಲೇಯರ್’ ನಿರ್ಧಾರಕ್ಕೆ ಕೇವಲ ಆದಾಯವೊಂದೇ ಮಾನದಂಡವಲ್ಲ. ಕ್ರೀಮಿ ಲೇಯರ್ ವರ್ಗೀಕರಣಕ್ಕೆ ಆದಾಯದ ಜೊತೆಗೆ ಅಭ್ಯರ್ಥಿಯ ಪೋಷಕರು ಹೊಂದಿರುವ ಹುದ್ದೆಯ ಶ್ರೇಣಿ ಮತ್ತು ಸಾಮಾಜಿಕ ಸ್ಥಾನಮಾನವನ್ನೂ ಪರಿಗಣಿಸಬೇಕು ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

“ಹುದ್ದೆಗಳ ವರ್ಗಗಳು ಮತ್ತು ಸ್ಥಾನಮಾನದ ನಿಯತಾಂಕಗಳನ್ನು ಉಲ್ಲೇಖಿಸದೆ, ಕೇವಲ ಆದಾಯದ ಬ್ರಾಕೆಟ್ಗಳ ಆಧಾರದ ಮೇಲೆ ಕ್ರೀಮಿ ಲೇಯರ್ ಸ್ಥಿತಿಯನ್ನು ನಿರ್ಧರಿಸುವುದು ಕಾನೂನಿನ ದೃಷ್ಟಿಯಲ್ಲಿ ಸರಿಯಲ್ಲ,” ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅವಲೋಕಿಸಿತು.

ಪ್ರಸ್ತುತ, ವಾರ್ಷಿಕವಾಗಿ 8 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯವಿರುವ ಒಬಿಸಿ ಕುಟುಂಬಗಳನ್ನು ಕ್ರೀಮಿ ಲೇಯರ್ ಎಂದು ಪರಿಗಣಿಸಲಾಗುತ್ತದೆ. ಸಂವಿಧಾನಾತ್ಮಕ ಹುದ್ದೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಶ್ರೇಣಿಯ ಅಧಿಕಾರಿಗಳು (ಗ್ರೂಪ್ ಎ ಮತ್ತು ಬಿ), ಸಶಸ್ತ್ರ ಪಡೆಗಳಲ್ಲಿ ಹಿರಿಯ ಹುದ್ದೆ ಹೊಂದಿರುವವರ ಮಕ್ಕಳು ಸಹ ಈ ವ್ಯಾಪ್ತಿಗೆ ಬರುತ್ತಾರೆ. ಆದಾಯದ ಮಿತಿಯನ್ನು ಕೊನೆಯದಾಗಿ 2017ರಲ್ಲಿ 6 ಲಕ್ಷದಿಂದ 8 ಲಕ್ಷಕ್ಕೆ ಏರಿಸಲಾಗಿತ್ತು.

‘ಕ್ರೀಮಿ ಲೇಯರ್’ ವಿವಾದ ಹಿನ್ನೆಲೆ ಏನು?
ಒಬಿಸಿ ವರ್ಗದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದವರನ್ನು ಮೀಸಲಾತಿಯಿಂದ ಹೊರಗಿಡಲು ಈ ‘ಕ್ರೀಮಿ ಲೇಯರ್’ ಪರಿಕಲ್ಪನೆಯನ್ನು ಪರಿಚಯಿಸಲಾಗಿತ್ತು. 1992ರ ಪ್ರಸಿದ್ಧ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಬಿಸಿ ಮೀಸಲಾತಿಯನ್ನು ಎತ್ತಿ ಹಿಡಿದಿತ್ತಾದರೂ, ಅರ್ಹ ಬಡವರಿಗೆ ಮಾತ್ರ ಇದರ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಶ್ರೀಮಂತ ವರ್ಗವನ್ನು ಹೊರಗಿಡಲು ಸೂಚಿಸಲಾಗಿತ್ತು.

ಸರ್ಕಾರವು 1993ರಲ್ಲಿ ಈ ಕುರಿತು ನಿಯಮಗಳನ್ನು ರೂಪಿಸಿತ್ತು. ಮೀಸಲಾತಿಯ ಲಾಭವು ಅತಿ ಹೆಚ್ಚು ಹಿಂದುಳಿದಿರುವ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಒಬಿಸಿ ಸಮುದಾಯಗಳಿಗೆ ತಲುಪಬೇಕು ಎಂಬುದು ಈ ಎಲ್ಲ ನಿಯಮಗಳ ಮೂಲ ಉದ್ದೇಶ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.