ಜಡ್ಜ್ ಗಳ ನಿವೃತ್ತಿ ವಯಸ್ಸು ಹೆಚ್ಚಳ ಆಡಳಿತಾತ್ಮಕವಾಗಿ ಬಗೆಹರಿಸಿ – ಸುಪ್ರೀಂ ಕೋರ್ಟ್
ನವದೆಹಲಿ: ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಳ ಮಾಡುವಂತೆ ಪ್ರಸ್ತಾಪ ಬಂದ ಹಿನ್ನೆಲೆಯಲ್ಲಿ ಇದನ್ನು ಆಡಳಿತಾತ್ಮಕವಾಗಿ ಬಗೆಹರಿಸುವಂತೆ ಜಾರ್ಖಂಡ್ ಹೈಕೋರ್ಟ್ ಸಿಜೆಗೆ ಸುಪ್ರೀಂ ಕೋರ್ಟ್ ಮನವಿ ಮಾಡಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ರಂಜಿತ್ ಕುಮಾರ್ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಕಲ್ಯ ಬಾಗಿ ಹಾಗೂ ಆರ್. ಮಹಾದೇವನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವ ಕುರಿತು ಮನವಿಯನ್ನು ಪರಿಗಣಿಸುವಂತೆ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿತು.
ಜಿಲ್ಲೆಯ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 61 ವರ್ಷಗಳಿಗೆ ಹೆಚ್ಚಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಆ ವಿಷಯವನ್ನು ಆಡಳಿತಾತ್ಮಕವಾಗಿ ಪರಿಗಣಿಸುವಂತೆ ತಿಳಿಸಿತು.
ಅರ್ಜಿದಾರರ ಪರ ವಾದ ಮಂಡಸಿದ ವಕೀಲರು, ತೆಲಂಗಾಣ ರಾಜ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಿಸಿರುವುದನ್ನು ಉಲ್ಲೇಖಿಸಿ, ಜಾರ್ಖಂಡ್ ಸೇವಾ ನಿಯಮಗಳ ಪ್ರಕಾರ, ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 60 ವರ್ಷಗಳಾಗಿದೆ. “ನ್ಯಾಯಾಂಗ ಅಧಿಕಾರಿಗಳಲ್ಲಿ ಏಕರೂಪತೆಯನ್ನು ನಾವು ಕೋರುತ್ತಿದ್ದೇವೆ, ಏಕರೂಪತೆ ಇದ್ದಲ್ಲಿ ಅದು ಸಮಾನ ವರ್ಗವನ್ನು ಸೃಷ್ಟಿಸುತ್ತದೆ. ಜಾರ್ಖಂಡ್ ಮತ್ತು ತೆಲಂಗಾಣ ರಾಜ್ಯಗಳ ನ್ಯಾಯಾಂಗ ಅಧಿಕಾರಿಗಳ ನಡುವೆ ಯಾವುದೇ ‘ಬುದ್ಧಿಗಮ ವಿಭಿನ್ನತೆ’ ಇಲ್ಲ ಎಂದು ತಿಳಿಸಿದರು..
ಇನ್ನು, ನಿವೃತ್ತಿಯ ನಂತರ ಪುನರ್ ನೇಮಕ ನೀಡುವಂತೆ ನಿರ್ದೇಶನ ನೀಡಬೇಕೆಂಬುದು ಸಹ ಮನವಿಯಲ್ಲಿ ಕೇಳದ್ದು, ಇಂತಹ ಪುನರ್ ನೇಮಕವನ್ನು 17 ಇತರೆ ರಾಜ್ಯಗಳು ಅನುಮತಿಸಿರುವುದಾಗಿ ವಕೀಲರು ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದರು.
ಇದು ಕಾರ್ಯನಿರ್ವಹಣಾ ವಿಭಾಗದ ನೀತಿ ನಿರ್ಧಾರ ಕ್ಷೇತ್ರಕ್ಕೆ ಸೇರಿರುವ ವಿಷಯ ಎಂದು ಪರಿಗಣಿಸಿದ ನ್ಯಾಯಪೀಠ, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ”ನಿವೃತ್ತಿ ವಯಸ್ಸನ್ನು 61 ಅಥವಾ 62 ವರ್ಷಗಳಿಗೆ ಹೆಚ್ಚಿಸಲು ಅರ್ಜಿದಾರರು ಕೋರುವ ನಿರ್ದೇಶನಕ್ಕೆ ನೀತಿ ನಿರ್ಧಾರದ ಅಗತ್ಯವಿದೆ. ತತ್ಪರಿಣಾಮವಾಗಿ ಸೇವಾ ನಿಯಮಗಳಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ. ಕೆಲ ರಾಜ್ಯಗಳಲ್ಲಿ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 61 ವರ್ಷಗಳಾಗಿದೆ; ಮುಖ್ಯವಾಗಿ ಆ ರಾಜ್ಯಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿವೃತ್ತಿ ವಯಸ್ಸು 62 ವರ್ಷಗಳಾಗಿವೆ.” ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಈ ವಿಷಯದ ಕುರಿತು ಸಮಗ್ರ ದೃಷ್ಟಿಕೋನವನ್ನು ಎಲ್ಲ ಪಾಲುದಾರರು ತೆಗೆದುಕೊಳ್ಳಬೇಕೆಂಬುದರಲ್ಲಿ ಯಾವುದೇ ಸಂಶಯವಿಲ್ಲ; ಮುಖ್ಯವಾಗಿ ಎಲ್ಲಾ ರಾಜ್ಯಗಳಲ್ಲಿ ನೇಮಕಾತಿ ಅಥವಾ ನಿವೃತ್ತಿ ವಯಸ್ಸು ಸೇರಿದಂತೆ ಸೇವಾ ಷರತ್ತುಗಳು ಸಮಾನವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ಈ ವಿಷಯವನ್ನು ನ್ಯಾಯಾಂಗ ಆದೇಶದ ಮೂಲಕ ಪರಿಹರಿಸುವುದು ಯುಕ್ತವಲ್ಲ. ಆದ್ದರಿಂದ, ಈ ರಿಟ್ ಅರ್ಜಿಯನ್ನು ಪರಿಗಣಿಸಲು ನಾವು ಇಚ್ಛಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು. ಅರ್ಜಿದಾರರಿಗೆ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸುವ ಸ್ವಾತಂತ್ರ್ಯವನ್ನು ಪೀಠ ನೀಡಿದ್ದು, ರಾಜ್ಯ ಸರ್ಕಾರದೊಂದಿಗೆ ಪರಾಮರ್ಶಿಸಿ ಆಡಳಿತಾತ್ಮಕವಾಗಿ ಆ ಮನವಿಯನ್ನು ಪರಿಗಣಿಸಬಹುದೆಂದು ತಿಳಿಸಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಎ.ಜಿ. ಮಸೀಹ್ ಅವರ ಪೀಠ, ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 61 ವರ್ಷಗಳಿಗೆ ಹೆಚ್ಚಿಸುವುದರಲ್ಲಿ ಯಾವುದೇ ಅಡೆತಡೆ ಇಲ್ಲವೆಂದು ಸ್ಪಷ್ಟಪಡಿಸಿತ್ತು, ಮಧ್ಯಪ್ರದೇಶ ಹೈಕೋರ್ಟ್ಗೆ ಮೂರು ತಿಂಗಳೊಳಗೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿತ್ತು
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
