ಹೆಚ್ಚಿನ ಭೂಪರಿಹಾರ ಪ್ರಶ್ನಿಸಿ ಇನ್ಫೋಸಿಸ್ ಮೇಲ್ಮನವಿ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಮೈಸೂರಿನಲ್ಲಿ ಕಂಪನಿಯ ಕ್ಯಾಂಪಸ್ ವಿಸ್ತರಣೆಗಾಗಿ ಭೂಸಂತ್ರಸ್ತರಿಗೆ ನಿಗದಿಪಡಿಸಿದ ಹೆಚ್ಚಿನ ಭೂಪರಿಹಾರ ಪ್ರಶ್ನಿಸಿ ಇನ್ಫೋಸಿಸ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮೈಸೂರಿನಲ್ಲಿ ಕ್ಯಾಂಪಸ್ ವಿಸ್ತರಣೆಗಾಗಿ ಇನ್ಫೋಸಿಸ್ 2005ರಲ್ಲಿ ಹೆಚ್ಚುವರಿಯಾಗಿ 1.05 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಎಕರೆಗೆ ₹4.85 ಲಕ್ಷ ಪರಿಹಾರವನ್ನು ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದು, ಇದನ್ನು ಒಪ್ಪದ ಭೂಮಾಲೀಕರು, 1894ರ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 18ರ ಅಡಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.
ಇದಕ್ಕೆ ಕಂಪನಿ ಒಪ್ಪಿರಲಿಲ್ಲ. ಬಳಿಕ ಭೂಮಾಲೀಕರು ಮೈಸೂರಿನ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚದರ ಅಡಿಗೆ ₹220 ಪರಿಹಾರ ಹಾಗೂ ಬಡ್ಡಿ ನೀಡಬೇಕು ಎಂದು ನ್ಯಾಯಾಲಯ 2020ರಲ್ಲಿ ನಿರ್ದೇಶನ ನೀಡಿತ್ತು. ಈ ಆದೇಶ ಪ್ರಶ್ನಿಸಿ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ನ ವಿಭಾಗೀಯ ಪೀಠವು 2024ರ ಅಕ್ಟೋಬರ್ ನಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಇನ್ಫೋಸಿಸ್ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಹಾಗೂ ಮನಮೋಹನ್ ಅವರ ಪೀಠವು, ‘ಹೈಕೋರ್ಟ್ ತೀರ್ಪು ನೀಡಿದ 160 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬೇಕಿತ್ತು. ಆದರೆ, ಕಂಪನಿ ಮೇಲ್ಮನವಿ ಸಲ್ಲಿಸುವಾಗ ವಿಳಂಬ ಮಾಡಿದೆ. ಹೀಗಾಗಿ, ಅರ್ಜಿ ವಜಾಗೊಳಿಸಲಾಗಿದೆ’ ಎಂದು ಹೇಳಿತು.
ಈ ವೇಳೆ ಇನ್ಫೋಸಿಸ್ ಪರ ವಾದ ಮಂಡಿಸಿದ ವಕೀಲರು, ದಾಖಲೆಗಳನ್ನು ಕನ್ನಡದಿಂದ ಇಂಗ್ಲಿಷ್ ಗೆ ಭಾಷಾಂತರಿಸಲು ಬಹಳ ಸಮಯ ವ್ಯಯವಾಯಿತು. ‘ಅರ್ಜಿ ವಜಾಗೊಳಿಸಬಾರದು. ಮೇಲ್ಮನವಿ ಅರ್ಜಿಗೆ ಪೂರಕವಾಗಿ ಹೊಸದಾಗಿ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ನೀಡಬೇಕು’ ಎಂದು ಕೋರಿದರು. ಆದರೂ ಸಹ ಈ ವಿನಂತಿಯನ್ನು ಪರಿಗಣಿಸಲು ಪೀಠ ನಿರಾಕರಿಸಿ ಮೇಲ್ಮನವಿ ಅರ್ಜಿಯನ್ನ ವಜಾಗೊಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
