20/05/2025

Law Guide Kannada

Online Guide

ಕುಡಿಯುವ ಚಟ ಮರೆ ಮಾಚಿದರೆ ವಿಮಾ ಕ್ಲೈಮ್ ತಿರಸ್ಕರಿಸುವ ಹಕ್ಕು ವಿಮಾ ಕಂಪೆನಿಗಳಿಗಿದೆ : ಸುಪ್ರೀಂ ಕೋರ್ಟ್

ನವದೆಹಲಿ: ವಿಮಾ ಕಂಪೆನಿಗಳಿಂದ ತಮ್ಮ ಕುಡಿಯುವ ಅಭ್ಯಾಸವನ್ನು ಮರೆಮಾಚುವ ಜನರ ಕ್ಲೈಮ್ಗಳನ್ನು ತಿರಸ್ಕರಿಸುವ ಹಕ್ಕು ಹಕ್ಕು ವಿಮಾ ಕಂಪೆನಿಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಜೀವನ್ ಆರೋಗ್ಯ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಅನ್ನು ನಿರಾಕರಿಸುವ ಜೀವ ವಿಮಾ ನಿಗಮದ (ಎಲ್ಐಸಿ) ನಿರ್ಧಾರವನ್ನು ಎತ್ತಿಹಿಡಿದಿದೆ. ಮರಣವು ನೇರವಾಗಿ ಮದ್ಯಪಾನದಿಂದ ಉಂಟಾಗದಿದ್ದರೂ ಸಹ, ವಿಮಾ ಕಂಪೆನಿಗಳು ಪಾಲಿಸಿದಾರರು ಆರೋಗ್ಯ ವಿಮೆ ಖರೀದಿಸುವಾಗ ತಮ್ಮ ಕುಡಿಯುವ ಅಭ್ಯಾಸವನ್ನು ಮರೆಮಾಡಿದರೆ ಕ್ಲೈಮ್ ಗಳನ್ನು ವಿಮಾಕಂಪನಿಗಳು ನಿರಾಕರಿಸಬಹುದು ಎಂಧು ನ್ಯಾಯಪೀಠ ತಿಳಿಸಿದೆ.

2013 ರಲ್ಲಿ ಪಾಲಿಸಿಯನ್ನು ತೆಗೆದುಕೊಂಡ ವ್ಯಕ್ತಿಯು ದೀರ್ಘಕಾಲದ ಮದ್ಯಪಾನಿ ಎಂದು ಬಹಿರಂಗಪಡಿಸಿರಲಿಲ್ಲ. ಒಂದು ವರ್ಷದೊಳಗೆ, ಆತನಿಗೆ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿ, ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆಯಲ್ಲಿದ್ದನು. ಅಂತಿಮವಾಗಿ ಹೃದಯ ಸ್ತಂಭನದಿಂದ ಆತ ಸಾವನ್ನಪ್ಪಿದನು.

ಆದರೆ ಪಾಲಿಸಿ ಅರ್ಜಿಯಲ್ಲಿ ಮೃತ ವ್ಯಕ್ತಿ ಮದ್ಯ ಸೇವಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ, ಈ ಅಂಶವನ್ನು ಮರೆಮಾಚುವುದು ಆತನ ಕ್ಲೈಮ್ ಅನ್ನು ರದ್ದುಗೊಳಿಸಲು ಸಾಕಾಗುತ್ತದೆ ಎಂದು ಕೋರ್ಟ್ ವಿಚಾರಣೆ ವೇಳೆ ಎಲ್ಐಸಿ ವಾದ ಮಂಡಿಸಿತು.

ವಿಮಾದಾರನು ತನ್ನ ವೈದ್ಯಕೀಯ ಇತಿಹಾಸವನ್ನು ಸಕ್ರಿಯವಾಗಿ ತಪ್ಪಾಗಿ ನಿರೂಪಿಸಿದ್ದಾನೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ವೈದ್ಯಕೀಯ ದಾಖಲೆಗಳು, ಮೃತ ವ್ಯಕ್ತಿಯು “ದೀರ್ಘಕಾಲದ ಮದ್ಯ ಸೇವನೆ” ಯ ಇತಿಹಾಸವನ್ನು ಹೊಂದಿದ್ದಾನೆ ಎಂದು ಸ್ಪಷ್ಟಪಡಿಸಿದೆ ಎಂದು ನ್ಯಾಯಾಲಯ ಗಮನಿಸಿ ಈ ತೀರ್ಪು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.