ಅಪಘಾತಕ್ಕೆ ರಸ್ತೆಗುಂಡಿಯೂ ಕಾರಣವೆಂದ ವಿಮಾ ಕಂಪನಿ: ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ರಸ್ತೆ ಅಪಘಾತಕ್ಕೆ ಚಾಲಕನ ವೇಗ ಮತ್ತು ನಿರ್ಲಕ್ಷ್ಯದ ಜತೆಗೆ ರಸ್ತೆಗುಂಡಿಯೂ ಕಾರಣ. ಹೀಗಾಗಿ ಬಿಬಿಎಂಪಿ ಹಾಗೂ ಗುತ್ತಿಗೆದಾರರನನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕೆಂದು ಕೋರಿ ಖಾಸಗಿ ವಿಮಾ ಕಂಪನಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯನ್ನ ವಜಾಗೊಳಿಸಿದೆ. ವಿಮಾಕಂಪನಿಯ ಅರ್ಜಿ ವಿಚಾರಣೆ ನಡೆಸಿ ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಕಾರು ಚಾಲಕನ ವೇಗದ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಪಘಾತ ನಡೆದ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ. ಒಟ್ಟಾರೆ ಘಟನೆಗೆ ಯಾರೆಲ್ಲ ಕಾರಣರಾಗಿದ್ದಾರೋ ಅವರನ್ನೆಲ್ಲ ಪ್ರತಿವಾದಿಗಳನ್ನಾಗಿ ಪರಿಗಣಿಸಬೇಕು ಎಂದು ಹೇಳಿದೆ.
ಸುಪ್ರೀಂಕೋರ್ಟ್ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕಾನೂನಿನಲ್ಲಿ ಇಬ್ಬರು ಹೊಣೆಗಾರರನ್ನು ಪರಿಹಾರಕ್ಕೆ ನಿಗದಿಪಡಿಸಲಾಗದು. ಈ ಪ್ರಕರಣದಲ್ಲಿ ಅಪಘಾತಕ್ಕೆ ಯಾವ ವ್ಯಕ್ತಿಯು ಕಾರಣನಾಗಿರುತ್ತಾನೋ ಆತನೇ ಪರಿಹಾರ ಕೋರಲಾಗದು. ಘಟನೆಗೆ ಆತನ ನಿರ್ಲಕ್ಷ್ಯದ ಪಾತ್ರವೂ ಇದೆ. ಈ ಪ್ರಕರಣ ಸಮಗ್ರ ನಿರ್ಲಕ್ಷ್ಯದ ಪ್ರಕರಣವೇ ಹೊರತು ಮತ್ತೇನಲ್ಲ ಎಂದು ತಿಳಿಸಿದೆ.
ಪ್ರಕರಣದ ವಿವರ
2022ರ ಅ.19ರಂದು ಬೆಂಗಳೂರಿನಲ್ಲಿ ಕೇರಳದ ಪಠಾಣಂತಿಟ್ಟ ಮೂಲದ ಆರ್.ಎಂ. ರಾಹುಲ್ ಮೋಟಾರ್ ಸೈಕಲ್ ಓಡಿಸುತ್ತಿದ್ದಾಗ ಕಾರು ಡಿಕ್ಕಿಯಾಗಿತ್ತು. ರಾಹುಲ್ ಹಾಗೂ ಸವಾರ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಅವರ ಕುಟುಂಬದವರು 20 ಲಕ್ಷ ರೂ. ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಗೆ (ಎಂಎಸಿಸಿ) ಅರ್ಜಿ ಸಲ್ಲಿಸಿದ್ದರು.
ವಿಮಾ ಕಂಪನಿ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ ಬೈಕ್ ಮಾಲೀಕ, ಬೈಕ್ ವಿಮಾದಾರರು, ಬಿಬಿಎಂಪಿ ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಕೋರಿತ್ತು. ಜತೆಗೆ ಅಪಘಾತಕ್ಕೆ ರಸ್ತೆಯಲ್ಲಿ ಗುಂಡಿಗಳು ಇದ್ದಿದ್ದೂ ಕಾರಣ ಎಂದು ಹೇಳಿತ್ತು. 2024ರ ಜು.1ರಂದು ನ್ಯಾಯಮಂಡಳಿ ವಿಮಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಿತ್ತು,
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ