ಜೈಲುಶಿಕ್ಷೆಗೆ ಗುರಿಯಾದ ಅಪರಾಧಿಗೆ ಮಾಹಿತಿ ಇಲ್ಲದೇ ಅಶ್ರಯ ನೀಡಿದ್ರೆ ತಪ್ಪೆ…?
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬನಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಮಂಗಳೂರು ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ಪ್ರಕರಣ ದಾಖಲಿಸಬೇಕಾದರೆ ಆಶ್ರಯ ನೀಡಿದ ವ್ಯಕ್ತಿಗೆ ಅಪರಾಧಿಯು ಶಿಕ್ಷೆಗೆ ಗುರಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಇದರ ಜೊತೆಗೆ ಉದ್ದೇಶಪೂರ್ವಕವಾಗಿ ಅಪರಾಧಿಗೆ ಆತ ಆಶ್ರಯ ನೀಡಿರಬೇಕು. ಈ ಅಂಶವನ್ನು ಸಾಬೀತುಪಡಿಸುವಂತಹ ಅಂಶಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳು ಇರಬೇಕು ಎಂದು ಅಭಿಪ್ರಾಯ ಪಟ್ಟಿದೆ.
ಉದಯಕುಮಾರ್ ಶೆಟ್ಟಿ ಗಿs ಕರ್ನಾಟಕ ಸರಕಾರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿಂದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣದ ವಿವರ
ಮಂಗಳೂರಿನಲ್ಲಿ ನಡೆದಿದ್ದ ಕೊಲೆ ಅರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನಟೋರಿಯಸ್ ಕ್ರಿಮಿನಲ್ ಶರಣ್ ಆಲಿಯಾಸ್ ಶರಣ್ ಪೂಜಾರಿ ಎಂಬಾತನಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಕೂಡ ದೃಢಪಡಿಸಿತ್ತು. ಈ ನಡುವೆ ಶಿಕ್ಷೆಯಿಂದ ತಪ್ಪಿಸಲು ಅಪರಾಧಿ ಶರಣ ತಲೆ ಮರೆಸಿಕೊಂಡಿದ್ದ. ಇತನನ್ನು ಬಂಧಿಸಲು ಬರ್ಕೆ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಅಂತಿಮವಾಗಿ ಉದಯ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಶರಣ್ ಪೂಜಾರಿಯನ್ನ ಬರ್ಕೆ ಪೊಲೀಸರು ಬಂಧಿಸಿದ್ದರು. ನಂತರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಆಶ್ರಯ ನೀಡಿದ್ದ ಆರೋಪದಡಿ ಉದಯ್ ಕುಮಾರ್ ಶೆಟ್ಟಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಉದಯ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಪರಾಧಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷಾಧಾರಗಳು ಇಲ್ಲ. ಈ ಬಗ್ಗೆ ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ ಎಂಬುದನ್ನು ಅರ್ಜಿದಾರರ ಪರ ವಾದಿಸಿದ ವಕೀಲರು ಹೇಳಿದರು.
ಅರ್ಜಿದಾರರ ಮನೆಗೆ ಅಪರಾಧಿ ಬಂದಾಗ ಆತನಿಗೆ ಶಿಕ್ಷೆ ಆಗಿರುವ ಬಗ್ಗೆ ಯಾವುದೇ ಮಾಹಿತಿ ಅರ್ಜಿದಾರರಿಗೆ ಇರಲಿಲ್ಲ. ಹೀಗಾಗಿ ಅವರು ಆಶ್ರಯ ನೀಡಿದ್ದರು ಎಂದು ಅರ್ಜಿದಾರರ ಪರ ವಾದ ಮಂಡಿಸಲಾಗಿತ್ತು
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಭಾರತೀಯ ದಂಡ ಸಮಿತಿ ಐಪಿಸಿ ಸೆಕ್ಷನ್ 216ರ ಅಡಿಯಲ್ಲಿ (ಅಪರಾಧಿಗೆ ಉದ್ದೇಶಪೂರ್ವಕವಾಗಿ ಆಶ್ರಯ ನೀಡುವುದು) ಪ್ರಕರಣ ದಾಖಲಿಸಬೇಕಾದರೆ ಆಶ್ರಯ ನೀಡಿದ ವ್ಯಕ್ತಿಗೆ ಅಪರಾಧಿಯು ಶಿಕ್ಷೆಗೆ ಗುರಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಇದರ ಜೊತೆಗೆ ಉದ್ದೇಶಪೂರ್ವಕವಾಗಿ ಅಪರಾಧಿಗೆ ಆತ ಆಶ್ರಯ ನೀಡಿರಬೇಕು. ಈ ಅಂಶವನ್ನು ಸಾಬೀತುಪಡಿಸುವಂತಹ ಅಂಶಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳು ಇರಬೇಕು. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್ಗಳ ದಾಖಲೆಗಳು ಲಭ್ಯವಾಗಿದೆ. ಅದರಂತೆ ಉದ್ದೇಶಪೂರ್ವಕವಾಗಿ ಅರ್ಜಿದಾರರು ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ಸೂಚಿಸುವ ಯಾವುದೇ ಸಂದೇಶ ಅಥವಾ ಮಾತುಕತೆಗಳು ನಡೆದಿಲ್ಲ ಎಂಬುದನ್ನು ಗಮನಿಸಿತು.
ಅರ್ಜಿದಾರರ ಮನೆಯಿಂದ ಅಪರಾಧಿಯನ್ನು ಬಂಧಿಸಲಾಗಿದೆ ಎಂಬ ಅಂಶವನ್ನು ಬಿಟ್ಟರೆ. ಅರ್ಜಿದಾರರಿಗೆ ಅಪರಾಧಿಯ ಶಿಕ್ಷೆಯ ಬಗ್ಗೆ ತಿಳಿದಿತ್ತು ಮತ್ತು ಅವರು ಉದ್ದೇಶಪೂರ್ವಕವಾಗಿ ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ವಿರುದ್ಧ ಕಾನೂನು ಕ್ರಮಗಳನ್ನು ಮುಂದುವರಿಸಿದರೆ, ಅದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
