07/03/2026

Law Guide Kannada

Online Guide

ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅತ್ಯಂತ ಅವಶ್ಯಕವೇ..? ಹೈಕೋರ್ಟ್ ಅಭಿಪ್ರಾಯವೇನು..?

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ. ವಿಶೇಷವಾಗಿ ಮಹಿಳೆ ಮತ್ತು ಮಕ್ಕಳ ಗೌರವ ಕಾಪಾಡಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ. ಇಲ್ಲದಿದ್ದರೆ ಸಂವಿಧಾನದಲ್ಲಿ ನಿಗದಿಪಡಿಸಲಾದ ಘನತೆಯ ಹಕ್ಕನ್ನು ಹಳಿತಪ್ಪಿಸಲಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 79(3)(b) ಅಡಿ ಟ್ವೀಟ್ ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಎಕ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಹೈಕೋರ್ಟ್ ವಜಾಗೊಳಿಸಿದೆ.

ನಿರ್ಬಂಧಿಸುವ ಆದೇಶ ನೀಡುವ ಕೇಂದ್ರ ಸರ್ಕಾರದ ಸೆನ್ಸಾರ್ ಶಿಪ್(ಸಹಯೋಗ್) ಪೋರ್ಟಲ್, ತನ್ನ ವಿರುದ್ಧ ಬಲವಂತದ ಅಥವಾ ಪೂರ್ವಾಗ್ರಹ ಪೀಡಿತ ಕ್ರಮ ಕೈಗೊಳ್ಳದಂತೆ ತಡೆಯುವಂತೆ ಕೋರಿ ಎಕ್ಸ್ ಕಾರ್ಪ್ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಪೀಠವು, “ಮಾಹಿತಿ ಮತ್ತು ಸಂವಹನ, ಅದರ ಹರಡುವಿಕೆ ಅಥವಾ ವೇಗವನ್ನು ಯಾವತ್ತೂ ನಿಯಂತ್ರಿಸದೆ ಬಿಟ್ಟಿಲ್ಲ. ಇದು ನಿಯಂತ್ರಣದ ವಿಷಯವಾಗಿದೆ. ತಂತ್ರಜ್ಞಾನವು ಸಂದೇಶವಾಹಕರಿಂದ ಅಂಚೆ ಸಾಧನಗಳವರೆಗೆ, ವಾಟ್ಸಾಪ್, ಇನ್ ಸ್ಟಾಗ್ರಾಮ್ ಮತ್ತು ಸ್ನ್ಯಾಪ್ ಚಾಟ್ ಗಳ ಯುಗದವರೆಗೆ ಅಭಿವೃದ್ಧಿ ಹೊಂದಿದಾಗ, ಎಲ್ಲವನ್ನೂ ಜಾಗತಿಕವಾಗಿ ಮತ್ತು ಸ್ಥಳೀಯವಾಗಿ ಆಡಳಿತಗಳಿಂದ ನಿಯಂತ್ರಿಸಲಾಗಿದೆ. ಸಾಮಾಜಿಕ ತಾಣಗಳ ಮೇಲೆ ನಿಯಂತ್ರಣ ಹೇರುವುದು ಈ ಕಾಲದ ಅತ್ಯಂತ ಅವಶ್ಯಕವಾಗಿದೆ” ಎಂದು ನ್ಯಾಯಪೀಠ ತಿಳಿಸಿದೆ.

ದೇಶದ ನಾಗರಿಕರು ಮತ್ತು ಟ್ವೀಟರ್ ಮಧ್ಯೆ ಸಹಯೋಗ್ ಪೋರ್ಟಲ್ ಭರವಸೆ ಬೆಳಕಾಗಿ ಕೆಲಸ ಮಾಡಲಿದೆ. ದೇಶದಲ್ಲಿ ಸೈಬರ್ ಕ್ರೈಮ್ ಗಳನ್ನು ತಡೆಯುವ ವ್ಯವಸ್ಥೆಯಾಗಿ ಸಹಯೋಗ್ ಪೋರ್ಟಲ್ ಕೆಲಸ ಮಾಡಲಿದೆ ಎಂದು ನ್ಯಾಯಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.