ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರು ಕಡ್ಡಾಯವೇ..? ಸ್ಪಷ್ಟಪಡಿಸಿದ ಹೈಕೋರ್ಟ್
ಬೆಂಗಳೂರು: ಜನನ ಪ್ರಮಾಣಪತ್ರದಲ್ಲಿ ಮಗುವಿನ ತಂದೆಯ ಹೆಸರು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಜನನ ಪ್ರಮಾಣಪತ್ರದಲ್ಲಿ ಉಪ ನಾಮ ಬದಲಾವಣೆಗೆ ಕೋರಿ ಸಲ್ಲಿಸಿದ್ದ ಮನವಿಯಲ್ಲಿ ಕಾರಣ ನೀಡದೆ ತಿರಸ್ಕರಿಸಿದ ಜನನ ಮತ್ತು ಮರಣ ನೋಂದಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಮಗುವಿನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಲಿವ್ ಇನ್ ರಿಲೇಶನ್ ನಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರು ಅಳಿಸಿದರೆ ಕಾನೂನುಬದ್ಧ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರದು. ಮಗುವಿಗೆ ತಂದೆಯ ಉಪನಾಮ ಕಡ್ಡಾಯವಲ್ಲ ಎಂದು ಹೇಳಿದೆ.
ತಾಯಿ ಏಕೈಕ ಆರೈಕೆದಾರರು ಮತ್ತು ನೈಸರ್ಗಿಕ ಪೋಷಕರಾಗಿದ್ದರೆ ವಾಸ್ತವವಾಗಿ ತಾಯಿ ವಂಶಾವಳಿಯನ್ನು ಮಗುವಿನ ಉಪನಾಮದ ಗುರುತು ಎಂದು ಗುರುತಿಸುವಲ್ಲಿ ಯಾವುದೇ ಸಂವಿಧಾನಿಕ ಅಡಚಣೆ ಇಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಜನನ ಪ್ರಮಾಣಪತ್ರದಲ್ಲಿನ ಹೆಸರಿನಲ್ಲಿ ಉಪ ನಾಮ ಬದಲಾವಣೆಗೆ ನಮಗೆ ಅಧಿಕಾರವಿಲ್ಲ ಎಂಬ ಉಪ ನೋಂದಣಾಧಿಕಾರಿಯವರ ವಾದ ತಳ್ಳಿ ಹಾಕಿದ ನ್ಯಾಯಪೀಠುವು, 1969ರ ಜನನ ಮತ್ತು ನೋಂದಣಿ ಕಾಯ್ದೆಯ ಪ್ರಕಾರ ಹೆಸರಿನಲ್ಲಿ ಗೊಂದಲ ಸರಿಪಡಿಸಲು ಇಲಾಖೆಯ ರಿಜಿಸ್ಟ್ರಾರ್ ಗೆ ಅಧಿಕಾರವಿರಲಿದೆ. ಅದರಂತೆ ಹೆಸರಿನಲ್ಲಿ ದೋಷಗಳನ್ನು ಮಾತ್ರವಲ್ಲದೆ ವಿಷಯ ವಸ್ತುವನ್ನೂ ಸರಿಪಡಿಸಬಹುದಾಗಿದೆ ಎಂದು ವಿವರಿಸಿತು.
ಜನನ ಪ್ರಮಾಣಪತ್ರದಿಂದ ತಂದೆಯ ಹೆಸರನ್ನು ಅಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿಲ್ಲ. ತಂದೆಗೆ ಸಂಬಂಧಿಸಿದ ನಮೂನೆಯಲ್ಲಿ ಜೈವಿಕ ತಂದೆಯ ಹೆಸರಿನ ಜೊತೆಗೆ ತಾಯಿಯ ಕುಟುಂಬದ ಹೆಸರನ್ನೂ ಸೇರಿಸಿ ಮಗುವಿನ ಉಪನಾಮಕ್ಕೆ ಮಾತ್ರ ಬದಲಾವಣೆ ಕೋರಿದ್ದಾರೆ. ಮಗುವಿನ ಉಪನಾಮ ಬದಲಾಯಿಸುವುದರಿಂದ ಅನುವಂಶಿಕತೆ, ಉತ್ತರಾಧಿಕಾರ ಮತ್ತು ನಿರ್ವಹೆಯ ಹಕ್ಕುಗಳು ಸೇರಿ ಪ್ರಸ್ತುತ ಜಾರಿಯಲ್ಲಿ ಇರುವ ಯಾವುದೇ ಕಾನೂನಿನ ಅಡಿ ಮಗುವಿನ ಜೈವಿಕ ತಂದೆಯಿಂದ ಇರಬಹುದಾದ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಏನಿದು ಘಟನೆ
ನೇಪಾಳ ಮೂಲದ ಪುರುಷನೊಂದಿಗೆ ಅರ್ಜಿದಾರ ಮಹಿಳೆ ಲಿವ್ ಇನ್ ರಿಲೇಷನ್ ಹೊಂದಿದ್ದರು. ಇವರಿಗೆ 2017ರಲ್ಲಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಮಗು ಜನನದ ಬಳಿಕ ತಂದೆ, ಮಹಿಳೆ ಮತ್ತು ಮಗುವಿನಿಂದ ದೂರ ನೆಲೆಸಿದ್ದರು. ಅಲ್ಲದೆ, ಮಗುವಿನ ಪಾಲನೆಗೆ ಯಾವುದೇ ನೆರವು ನೀಡಲಿಲ್ಲ.
ಈ ನಡುವೆ, ಮಗುವಿನ ಜನನ ಪ್ರಮಾಣದಲ್ಲಿನ ಉಪನಾಮವನ್ನು ತಂದೆಯ ಬದಲಿಗೆ ತಾಯಿಯ ಹೆಸರನ್ನು ಸೇರಿಸುವಂತೆ ಕೋರಿ ಮಹಿಳೆ ಬಿಬಿಎಂಪಿ ಜನನ ಮರಣ ರಿಜಿಸ್ಟ್ರಾರ್ ಗೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ರಿಜಿಸ್ಟ್ರಾರ್ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಬಾಧಿತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
