ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಾರ್ವಜನಿಕ ಕಾಳಜಿ ಎಷ್ಟರ ಮಟ್ಟಿಗಿದೆ ಚೆನ್ನಾಗಿ ಗೊತ್ತಿದೆ – ಹೈಕೋರ್ಟ್ ಚಾಟಿ
ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಕ್ಕಾಗಿ ಅಲೆಯುವ ಸಾರ್ವಜನಿಕರಿಗೆ ಅಲ್ಲಿನ ಅಧಿಕಾರಿಗಳ ನೌಕರರ ಸ್ಪಂದನೆ ಹೇಗಿರುತ್ತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂತೆಯೇ ಕರ್ನಾಟಕ ಹೈಕೋರ್ಟ್ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಅಧಿಕಾರಿಗಳು ಸಿಬ್ಬಂದಿಗಳ ಕೆಲಸ ಸಾರ್ವಜನಿಕ ಕಾಳಜಿಯ ಬಗ್ಗೆ ಪ್ರಸ್ತಾಪಿಸಿ ಚಾಟಿ ಬೀಸಿದೆ.
‘ಸಬ್ ರಿಜಿಸ್ಟ್ರಾರ್ ಕಚೇರಿಗಳು, ಅಲ್ಲಿನ ನೌಕರರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಎಷ್ಟರಮಟ್ಟಿಗೆ ಸಾರ್ವಜನಿಕ ಕಾಳಜಿಯಿಂದ ಸರ್ಕಾರದ ಕೆಲಸ ಮಾಡುತ್ತಾರೆ ಎಂಬುದು ಚೆನ್ನಾಗಿ ಗೊತ್ತಿದೆ..!’ ಎಂದು ಪ್ರಕರಣವೊಂದರಲ್ಲಿ ಹೈಕೋರ್ಟ್ ಕುಟುಕಿದೆ.
‘ಸ್ಥಿರಾಸ್ತಿ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದದ ಸಮಯದಲ್ಲಿ ಲಗತ್ತಿಸಲಾದ ಹಳೆಯ ಫೋಟೊವನ್ನು ನೋಂದಣಿ ಸಮಯದಲ್ಲಿ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ ಎಂಬ ಆರೋಪದಡಿ 2025ರ ಡಿಸೆಂಬರ್ 4ರಂದು ದಾಖಲಾಗಿರುವ ಎಫ್ ಐಆರ್ ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಿಸಿಎಚ್-71ರಲ್ಲಿ ನಡೆಯುತ್ತಿರುವ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಡಬೇಕು’ ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು.
‘ನಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಡಿ.ಹಿತೇಂದ್ರ ಮತ್ತು ಎಚ್.ವಿಜಯಲಕ್ಷ್ಮಿ ಎಂಬುವವರು ಸಲ್ಲಿಸಿದ್ದ ಈ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಪ್ರಕರಣದ ತನಿಖೆಗೆ ತಡೆ ನೀಡಲು ನಿರಾಕರಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಪಿ.ಎನ್.ಮನಮೋಹನ್, ‘ಅರ್ಜಿದಾರರು ಯಾವುದೇ ತಪ್ಪು ಮಾಡಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಯ ಕರ್ತವ್ಯದ ಕುರಿತಾದ ಸುಪ್ರಿಂ ಕೋರ್ಟ್ ಆದೇಶಗಳಿಗೆ ಅನುಗುಣವಾಗಿ ಈ ಪ್ರಕರಣವನ್ನು ಮನ್ನಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಅರ್ಜಿದಾರರು ತನಿಖೆಗೆ ಸಹಕಾರ ನೀಡುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಎಲ್ಲವನ್ನೂ ರಿಜಿಸ್ಟರ್ ಮಾಡಬೇಕೆಂಬ ಭರದಲ್ಲಿ ದಾಖಲೆಗಳನ್ನು ಮತ್ತು ವ್ಯಕ್ತಿಗಳನ್ನು ಸರಿಯಾಗಿ ಗುರುತಿಸದೇ ಹೋದರೆ ಅದಕ್ಕೆ ಕಚೇರಿಯೊಳಗಿನ ಸಿಬ್ಬಂದಿಯೇ ಹೊಣೆಯಲ್ಲವೇ’ ಎಂದು ಪ್ರಶ್ನಿಸಿತು. ಅಂತೆಯೇ, ಪ್ರಕರಣದ ತನಿಖೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
