07/03/2026

Law Guide Kannada

Online Guide

ಮಗುವಿನ ಆರೈಕೆಗೆ ಜಡ್ಜ್ ಗೆ ರಜೆ ನಿರಾಕರಣೆ: ಹೈಕೋರ್ಟ್ ಗೆ ಸುಪ್ರೀಂ ನೋಟೀಸ್

ನವದೆಹಲಿ: ಮಗುವಿನ ಆರೈಕೆಗೆ ನ್ಯಾಯಾಧೀಶರೊಬ್ಬರಿಗೆ ರಜೆ ನೀಡಲು ನಿರಾಕರಿಸಿದ ಹಿನ್ನೆಲೆ, ಈ ಕುರಿತು ಪ್ರತಿಕ್ರಿಯೆ ಕೇಳಿ ಜಾರ್ಖಂಡ್ ಹೈಕೋರ್ಟ್ ಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ತನ್ನ ಮಗುವಿನ ಆರೈಕೆಗೆ ತಮಗೆ ರಜೆ ನಿರಾಕರಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಜಾರ್ಖಂಡ್ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕಾಶಿಕಾ ಎಂ. ಪ್ರಸಾದ್ ಎಂಬುವವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠವು ಜಾರ್ಖಂಡ್ ಹೈಕೋರ್ಟ್ ಪ್ರತಿಕ್ರಿಯೆಯನ್ನು ಕೇಳಿದೆ.

ಮಧ್ಯಪ್ರದೇಶದ ಕಾಶಿಕಾ ಎಂ. ಪ್ರಸಾದ್ ಅವರು ಸುಪ್ರೀಂ ಕೋರ್ಟ್ ನಲ್ಲಿ ತಾನೊಬ್ಬ ಸಿಂಗಲ್ ಪೇರೆಂಟ್ ಎಂದು ಹೇಳಿಕೊಂಡಿದ್ದರು. ಈ ನಡುವೆ ನ್ಯಾಯಾಧೀಶರ ರಜೆ ಕುರಿತಂತೆ ಜಾರ್ಖಂಡ್ ಹೈಕೋರ್ಟ್ ನ ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್ ನೋಟೀಸ್ ಜಾರಿಗೊಳಿಸಿದ್ದು, ನೋಟೀಸ್ ಗೆ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ. ಜೊತೆಗೆ ಮುಂದಿನ ವಿಚಾರಣೆ ವೇಳೆ ಪ್ರಕರಣದ ವಿಲೇವಾರಿ ಮಾಡುವುದಾಗಿ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಅರ್ಜಿದಾರ ನ್ಯಾಯಾಧೀಶರ ಕಾರ್ಯಕ್ಷಮತೆಯ ದಾಖಲೆಯನ್ನು ಪರಿಗಣಿಸಿ ಅವರಿಗೆ ರಜೆ ನೀಡಬೇಕು ಎಂದು ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.

ಸುಪ್ರೀಂ ಕೋರ್ಟ್ನ್ನು ಸಂಪರ್ಕಿಸುವ ಮುನ್ನ ಹೈಕೋರ್ಟ್ ಮುಂದೆ ಏಕೆ ಅರ್ಜಿ ಸಲ್ಲಿಸಲಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಅವರ ಪರ ವಕೀಲರು, ಅರ್ಜಿದಾರರು ತುರ್ತು ಪರಿಹಾರ ಕೋರುತ್ತಿದ್ದಾರೆ, ರಜಾ ಕಾಲೀನ ಪೀಠ ಬೇಸಿಗೆ ರಜೆಯ ನಂತರ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದ ಕಾರಣ ಅರ್ಜಿದಾರರು ಅನಿವಾರ್ಯವಾಗಿ ಸುಪ್ರೀಂ ಕದ ತಟ್ಟಬೇಕಾಯಿತು ಎಂದು ವಕೀಲರು ಮನವರಿಕೆ ಮಾಡಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.