07/03/2026

Law Guide Kannada

Online Guide

ವಕೀಲರು, ಪೊಲೀಸರಿಗೆ ಬಸ್ಕಿ ಹೊಡೆಸಿದ್ದ ಜಡ್ಜ್ ಡಿಸ್ ಮಿಸ್: ಆದೇಶ ಎತ್ತಿ ಹಿಡಿದ ಹೈಕೋರ್ಟ್

ಭೂಪಾಲ್: ಪೊಲೀಸರು, ವಕೀಲರಿಗೆ ಬಸ್ಕಿ ಹೊಡೆಸಿದ್ದ ನ್ಯಾಯಾಧೀಶರೊಬ್ಬರನ್ನ ವಜಗೊಳಿಸಿದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕ್ಷಮೆ ಯಾಚನೆಯ ರೂಪದಲ್ಲಿ ವಕೀಲರು ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ಕಿವಿ ಹಿಡಿದು ಬಸ್ಕಿ ಹೊಡೆಯುವಂತೆ ತರಬೇತಿಯ ಅವಧಿ (ಪ್ರೊಬೇಷನರಿ)ಯಲ್ಲಿದ್ದ ನ್ಯಾಯಾಂಗ ಅಧಿಕಾರಿ ಕೌಸ್ತುಭ ಖೇರಾ ಮಾಡಿದ್ದರು. ನಂತರ ಅವರನ್ನ ವಜಾಗೊಳಿಸಲಾಗಿತ್ತು. ತಮ್ಮನ್ನು ವಜಾಗೊಳಿಸಿದ ಆದೇಶವನ್ನ ಪ್ರಶ್ನಿಸಿ ನ್ಯಾಯಾಂಗ ಅಧಿಕಾರಿ ಕೌಸ್ತುಭ ಖೇರಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ವಿವೇಕ್ ಜೈನ್ ಅವರಿದ್ದ ವಿಭಾಗೀಯ ನ್ಯಾಯಪೀಠವು ವಜಾ ಆದೇಶವನ್ನ ಎತ್ತಿ ಹಿಡಿದು ಈ ತೀರ್ಪು ನೀಡಿದೆ.

ತರಬೇತಿಯ ಅವಧಿ (ಪ್ರೊಬೇಷನರಿ)ಯಲ್ಲಿ ನ್ಯಾಯಾಂಗ ಅಧಿಕಾರಿ ಕೌಸ್ತುಭ ಖೇರಾ ಅವರ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಈ ದೂರುಗಳಿಗಾಗಿ ಅವರನ್ನು ವಜಾಗೊಳಿಸುತ್ತಿಲ್ಲ. ಬದಲಿಗೆ, ನ್ಯಾಯಾಂಗ ಅಧಿಕಾರಿಯಾಗಿ ಅವರ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ವಜಾ ಮಾಡಲಾಗಿದೆ ಎಂದು ವಿಭಾಗಿಯ ನ್ಯಾಯ ಪೀಠ ಹೇಳಿದೆ.

ಜಡ್ಜ್ ಖೇರಾ ಅವರನ್ನು ವಜಾಗೊಳಿಸಿ ಪೂರ್ಣ ನ್ಯಾಯಾಲಯ ನಿರ್ಣಯ ಕೈಗೊಂಡಿದೆ. ಪೂರ್ಣ ನ್ಯಾಯಾಲಯ ನ್ಯಾಯಾಂಗ ಅಧಿಕಾರಿ ಖೇರಾ ಅವರ ವಿರುದ್ಧ ಯಾವುದೇ ದಂಡನಾತ್ಮಕ ಆದೇಶ ನೀಡಿಲ್ಲ. ಮೇಲ್ಮನವಿದಾರರು ತಮ್ಮ ಪ್ರೊಬೇಷನರಿ ಅವಧಿಯನ್ನು ಯಶಸ್ವಿ ಮತ್ತು ತೃಪ್ತಿಕರವಾಗಿ ಬಳಸಿಕೊಂಡಿಲ್ಲ ಎಂದು ತೀರ್ಪು ನೀಡುವ ಮೂಲಕ ಅವರನ್ನು ಸೇವೆಯಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ನ್ಯಾಯಪೀಠ ವಿವರಿಸಿದೆ.

2019ರಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ಕೌಸ್ತುಭ ಖೇರಾ ನೇಮಕಗೊಂಡಿದ್ದರು. ಈ ನಡುವೆ ವಕೀಲರೊಂದಿಗೆ ದುರ್ವರ್ತನೆ, ನ್ಯಾಯವಾದಿಗಳು ಮತ್ತು ಪೊಲೀಸ್ ಸಿಬ್ಬಂದಿಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಿದ್ದು, ಅನುಮತಿ ಇಲ್ಲದೆ ಪ್ರಧಾನ ಕಚೇರಿಯಿಂದ ಹೊರಗೆ ಹೊರಟು ಹೋಗಿದ್ದು, ತನ್ನದೇ ಜವಾನನಿಗೆ ದಂಡ ವಿಧಿಸಿದ್ದು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಅಟ್ಟಾಡಿಸಿ ಅನುಚಿತವಾಗಿ ನಡೆದುಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಜಡ್ ವಿರುದ್ಧ ಲಿಖಿತವಾಗಿ ಸ್ವೀಕರಿಸಲಾದ ಏಳು ದೂರುಗಳನ್ನು ಆಧರಿಸಿ ಅವರನ್ನು ವಜಾ ಮಾಡಲಾಗಿತ್ತು.

ಕೌಸ್ತುಭ ಖೇರಾ ಅವರನ್ನು ಹೈಕೋರ್ಟ್ ಆಡಳಿತ ಸಮಿತಿ ಮತ್ತು ಪೂರ್ಣ ನ್ಯಾಯಾಲಯದ ಶಿಫಾರಸಿನ ಆಧಾರದಲ್ಲಿ ಮಧ್ಯಪ್ರದೇಶ ಸರಕಾರ ಕಳೆದು ವರ್ಷ ಸೇವೆಯಿಂದ ವಜಾಗೊಳಿಸಿತ್ತು. ಈ ಆದೇಶವನ್ನು ಖೇರಾ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು
ಈ ಕುರಿತು ಅರ್ಜಿ ವಿಚಾರಣೆ ನಡೆಸಿ ವಾದಗಳನ್ನು ಆಲಿಸಿದ ನ್ಯಾಯಾಪೀಠ, ತಮ್ಮ ದುಷ್ಕೃತ್ಯಗಳಿಗಾಗಿ ಶಿಕ್ಷಾರ್ಹ ಕ್ರಮ ಕೈಗೊಳ್ಳುವುದು ಒಂದು ವಿಚಾರವಾದರೆ, ತರಬೇತಿಯ ಅವಧಿಯಲ್ಲಿ ಕಾರ್ಯ ಕ್ಷಮತೆಯ ಆಧಾರದ ಮೇಲೆ ಅಧಿಕಾರಿ ಸೂಕ್ತ ಅಧಿಕಾರಿಯಾಗುತ್ತಾರೋ ಇಲ್ಲವೋ ಎಂಬ ತೃಪ್ತಿಗೆ ಬರುವುದು ಸಂಪೂರ್ಣವಾಗಿ ಬೇರೆ ವಿಚಾರ. ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರನಿಗೆ ಯಾವುದೇ ದಂಡನೀಯ ಶಿಕ್ಷೆ ವಿಧಿಸಿಲ್ಲ ಎಂಬುದು ವಿವಾದವಲ್ಲ ಎಂದು ಹೇಳಿದೆ.

ಪ್ರಕರಣದಲ್ಲಿ ಮೇಲ್ಮನವಿದಾರರ ಪರ ಸ್ವತಃ ಜಡ್ಜ್ ಕೌಸ್ತುಭ ಖೇರಾ ಅವರೇ ವಾದ ಮಂಡಿಸಿದ್ದರು. ಹೈಕೋರ್ಟ್ ಪರ ಹಿರಿಯ ವಕೀಲ ಆದಿತ್ಯ ಅಧಿಕಾರಿ ಮತ್ತು ಅವರ ತಂಡ ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.