ಸುಪ್ರೀಂ ಕೋರ್ಟ್ ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ಅಸಮ್ಮತಿ ವ್ಯಕ್ತಪಡಿಸಿದ ನ್ಯಾ. ಬಿ.ವಿ ನಾಗರತ್ನ.
ನವದೆಹಲಿ: ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಪುಲ್ ಮನುಭಾಯ್ ಪಾಂಚೋಲಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸುವ ಕೊಲಿಜಿಯಂ ಶಿಫಾರಸಿಗೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊಲಿಜಿಯಂನ ಐವರು ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ನ್ಯಾಯಮೂರ್ತಿ ಪಾಂಚೋಲಿ ಅವರನ್ನು ಶಿಫಾರಸು ಮಾಡುವುದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 25 ರಂದು ಸಭೆ ನಡೆಸಿದ ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಜೆ ಕೆ ಮಹೇಶ್ವರಿ ಮತ್ತು ನಾಗರತ್ನ ಅವರನ್ನೊಳಗೊಂಡ ಐವರು ಸದಸ್ಯರನ್ನೊಳಗೊಂಡ ಕೊಲಿಜಿಯಂ, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಪಾಂಚೋಲಿ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಇದಕ್ಕೆ ನ್ಯಾಯಮೂರ್ತಿ ಬಿ. ವಿ. ನಾಗರತ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧ ಕಾರಣಗಳಿಂದ ಪಾಂಚೋಲಿ ಅವರ ಹೆಸರನ್ನು ಶಿಫಾರಸು ಮಾಡುವ ಕ್ರಮಕ್ಕೆ ನಾಗರತ್ನ ಅವರು ಅಸಮ್ಮತಿ ವ್ಯಕ್ತಪಡಿಸಿದ್ದು, ಅಕ್ಟೋಬರ್ 2031 ರಲ್ಲಿ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ನಿವೃತ್ತರಾಗಲಿದ್ದಾರೆ. ತದನಂತರ ನ್ಯಾಯಮೂರ್ತಿ ಪಾಂಚೋಲಿ ಅವರು ಮುಖ್ಯ ನ್ಯಾಯಮೂರ್ತಿ ಸ್ಥಾನದ ರೇಸ್ ನಲ್ಲಿರುತ್ತಾರೆ. ನ್ಯಾಯಮೂರ್ತಿ ನಾಗರತ್ನ ಅವರು ಸುಪ್ರೀಂಕೋರ್ಟ್ ನಲ್ಲಿರುವ ಏಕೈಕ ಮಹಿಳಾ ನ್ಯಾಯಾಧೀಶರಾಗಿದ್ದು, ಕಡಿಮೆ ಸೇವಾ ಹಿರಿತನ ಮತ್ತು ಗುಜರಾತ್ ಹೈಕೋರ್ಟ್ ನಿಂದ ಪಾಟ್ನಾ ಹೈಕೋರ್ಟ್ ಗೆ ವರ್ಗಾವಣೆ ಸುತ್ತಲಿನ ಕಥೆಗಳ ಹೊರತಾಗಿಯೂ ಪಾಂಚೋಲಿ ಅವರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿರುವುದಕ್ಕೆ ನಾಗರತ್ನ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪಾಂಚೋಲಿ ಅವರು 2023ರ ಜುಲೈನಲ್ಲಿ ಗುಜರಾತ್ ಹೈಕೋರ್ಟ್ ನಿಂದ ಪಾಟ್ನಾ ಹೈಕೋರ್ಟ್ ಗೆ ವರ್ಗಾವಣೆಯ ಕಾರಣದಿಂದ ನಾಗರತ್ನ ಅವರು ಆಕ್ಷೇಪ ಎತ್ತಿರಬಹುದು ಎನ್ನಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
