07/03/2026

Law Guide Kannada

Online Guide

ನ್ಯಾ. ವರ್ಮಾ ಮನೆಯಲ್ಲಿ ನಗದು ಪತ್ತೆ ಕೇಸ್ : ಆಂತರಿಕ ಸಮಿತಿ ವರದಿ ಮಾಹಿತಿಗಾಗಿ ಸಲ್ಲಿಸಿದ್ದ RTI ಅರ್ಜಿ ತಿರಸ್ಕರಿಸಿದ ಸುಪ್ರೀಂ

ನವದೆಹಲಿ: ನ್ಯಾಯಮೂರ್ತಿ ಯಶವಂತ ವರ್ಮ ಅವರ ದೆಹಲಿಯ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಂತರಿಕ ಸಮಿತಿ ವರದಿ ಮಾಹಿತಿ ನೀಡುವಂತೆ ಕೋರಿ ಸಲ್ಲಿಸಿದ್ದಆರ್ ಟಿಐ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಆಂತರಿಕ ವಿಚಾರಣಾ ಸಮಿತಿ ನೀಡಿದ್ದ ವರದಿ ಮತ್ತು ಆಗಿನ ಸಿಜೆಐ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಬರೆದ ಪತ್ರದ ಪ್ರತಿಯನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಯಡಿ ಮಹಾರಾಷ್ಟ್ರದ ವಕೀಲ ಅಮೃತ್ ಪಾಲ್ ಸಿಂಗ್ ಅವರು ಮೇ 9ರಂದು ಅರ್ಜಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಆಂತರಿಕ ಸಮಿತಿ ವರದಿ ಮಾಹಿತಿ ನೀಡಲಾಗದು ಎಂದು ಹೇಳಿದೆ.

ಆಂತರಿಕ ವಿಚಾರಣಾ ವರದಿ ಮತ್ತು ಆಗಿನ ಸಿಜೆಐ ಸಂಜೀವ್ ಖನ್ನಾ ಅವರು ಮುಂದಿನ ಕ್ರಮಕ್ಕಾಗಿ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಬರೆದ ಪತ್ರದ ಪ್ರತಿಯನ್ನು ನೀಡುವಂತೆ ಕೋರಿ ಅಮೃತ್ ಪಾಲ್ ಸಿಂಗ್ ಅವರು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಿಮಾನಿ ಶರದ್ ಅವರು ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಅರ್ಜಿದಾರರು ಕೇಳಿರುವ ಮಾಹಿತಿ ನೀಡುವುದನ್ನು ನಿರಾಕರಿಸಲು ‘ನ್ಯಾಯಾಂಗದ ಸ್ವಾತಂತ್ರ’, ‘ವಿಶ್ವಾಸಾರ್ಹ ಸಂಬಂಧ’, ‘ಖಾಸಗೀಕರಣದ ಹಕ್ಕಿನ ಮೇಲಿನ ದಾಳಿ’ ಹಾಗೂ ‘ಗೌಪ್ಯತೆಯ ಕರ್ತವ್ಯ ಉಲ್ಲಂಘನೆ’ ಮುಂತಾದ ಕಾರಣಗಳನ್ನು ನೀಡಲಾಗಿದೆ. ”ಸುಪ್ರೀಂ ಕೋರ್ಟ್ ಗಿs ಸುಭಾಷ್ ಚಂದ್ರ ಅಗರವಾಲ್” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ನಿಗದಿಪಡಿಸಿದ ಮಾನದಂಡಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕಾರಣ ನೀಡಲಾಗಿದೆ.

ಯಶವಂತ ವರ್ಮ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾದ ಪ್ರಕರಣವು ನ್ಯಾಯಾಂಗ ವಲಯದಲ್ಲಿ ವ್ಯಾಪಕ ಚರ್ಚೆಯಾಗಿತ್ತು. ವರ್ಮಾ ಅವರ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಭಾರಿ ಪ್ರಮಾಣದ ನಗದು ಪತ್ತೆ ಮಾಡಿದ್ದರು. ಘಟನೆಯ ತನಿಖೆಗಾಗಿ ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧವಾಲಿಯ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರಿಂದ ಸಮಿತಿ ರಚಿಸಲಾಗಿತ್ತು.

ಆ ಸಮಿತಿ ನೀಡಿದ್ದ ವರದಿಯನ್ನು ಸ್ವೀಕರಿಸಿದ್ದ ಅಂದಿನ ಸಿಜೆಐ ಸಂಜೀವ ಖನ್ನಾ ಅವರು, ನ್ಯಾಯಮೂರ್ತಿ ವರ್ಮ ಅವರು ರಾಜೀನಾಮೆ ನೀಡಬೇಕು, ಇಲ್ಲವೇ ವಾಗ್ದಂಡನೆ ಎದುರಿಸಬೇಕು ಎಂದು ಹೇಳಿದ್ದರು. ಆದರೆ ರಾಜೀನಾಮೆ ನೀಡಲು ನ್ಯಾಯಮೂರ್ತಿ ವರ್ಮ ನಿರಾಕರಿಸಿದ್ದರು. ಅದರ ಬೆನ್ನಲ್ಲೇ ವರ್ಮ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಮನವಿ ಮಾಡಿ ಸಿಜೆಐ ಸಂಜೀವ ಖನ್ನಾ ಅವರು, ರಾಷ್ಟ್ರಪತಿ ದೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಜೆ ಪತ್ರ ಬರೆದಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.