ವಿದ್ಯಾರ್ಥಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದ ನೋಟಿಸ್ ರದ್ದುಗೊಳಿಸಿ ಪೊಲೀಸರಿಗೆ ಕಾನೂನು ಪಾಠ ಮಾಡಿದ ಹೈಕೋರ್ಟ್

ಬೆಂಗಳೂರು: ವಿದ್ಯಾರ್ಥಿಯೊಬ್ಬನಿಗೆ ವಾಟ್ಸಪ್ ಮೂಲಕ ಪೊಲೀಸರು ಕಳುಹಿಸಿದ್ದ ನೋಟಿಸ್ ಅನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ವಾಟ್ಸ್ ಆಪ್ ಮೂಲಕ ಆರೋಪಿಗೆ ನೋಟೀಸ್ ಕಳಿಸಲು ಅವಕಾಶ ಇಲ್ಲ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಅಡಿಯಲ್ಲಿ ಪೊಲೀಸರು ಆರೋಪಿಗೆ ವಾಟ್ಸ್ ಆಪ್ ಮೂಲಕ ನೋಟೀಸ್ ಕಳುಹಿಸುವಂತಿಲ್ಲ ಎಂದು ಪೊಲೀಸರಿಗೆ ಕಾನೂನು ಪಾಠ ಮಾಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರಿಗೆ ತಿಳಿ ಹೇಳಿದ್ದು, ಬೆಂಗಳೂರಿನ ಆಡುಗೋಡಿ ಪೊಲೀಸರು ಬೆಂಗಳೂರಿನ ವಿದ್ಯಾರ್ಥಿ ಪವನ್ ಕುಮಾರ್ ಅವರಿಗೆ ನೀಡಿದ್ದ ನೋಟೀಸನ್ನು ರದ್ದುಪಡಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಅಡಿಯಲ್ಲಿ ನೋಟೀಸ್ ಜಾರಿಗೊಳಿಸಲು ಪ್ರಕ್ರಿಯೆ ಬಗ್ಗೆ ವಿವರವಾಗಿ ಹೇಳಿದೆ. ಅದಕ್ಕೆ ಹೊರತಾಗಿ ವಾಟ್ಸಾಪ್ ಮೂಲಕ ತನಿಖೆಗೆ ಹಾಜರಾಗಲು ನೋಟೀಸ್ ಜಾರಿ ಮಾಡುವುದು ಪರ್ಯಾಯ ವಿಧಾನವಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ ಎಂಬುದನ್ನು ನ್ಯಾಯಪೀಠ ನೆನಪಿಸಿತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 35 ಹಾಗೂ ಸಿಆರ್ಪಿಸಿಯ ಸೆಕ್ಷನ್ 41 ಅಡಿಯಲ್ಲಿ ವ್ಯಕ್ತಿಯು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರ ಬಂಧನ ಅಗತ್ಯವಿಲ್ಲದಿದ್ದರೆ ಅವರನ್ನು ವಿಚಾರಣೆಗೆ ತಮ್ಮ ಮುಂದೆ ಹಾಜರಾಗುವಂತೆ ಪೊಲೀಸರು ನೋಟೀಸ್ ಜಾರಿ ಮಾಡಬಹುದಾಗಿದೆ. ಆದರೆ, ಈ ನೋಟೀಸನ್ನು ವಾಟ್ಸ್ ಆಪ್ ಮೂಲಕ ಕಳುಹಿಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ಈ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್ ನ್ಯಾಯಪೀಠ, ಬೆಂಗಳೂರಿನ ಆಡುಗೋಡಿ ಪೊಲೀಸರು ವಿದ್ಯಾರ್ಥಿ ಪವನ್ ಕುಮಾರ್ ಅವರಿಗೆ ನೀಡಿದ್ದ ನೋಟೀಸನ್ನು ರದ್ದುಪಡಿಸಿದೆ.
ಏನಿದು ಪ್ರಕರಣ…
ಆಡುಗೋಡಿಯಲ್ಲಿ ವಾಸವಿರುವ ಶ್ರೀನಿವಾಸ್ ರಾವ್ ಎಂಬವರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಸಲಹೆ ಬಂದಿತ್ತು. ಹೀಗಾಗಿ ಒಂದು ವಾಟ್ಸ್ ಆ್ಯಪ್ ಗ್ರೂಪ್ ಗೆ ಸೇರಿದ ಬಳಿಕ ಕೆಲವು ಲಿಂಕ್ಗಳನ್ನು ಕಳುಹಿಸಿ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿ ಸುಮಾರು 4.35 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.
ದೂರಿನ ತನಿಖೆ ಪ್ರಾರಂಭಿಸಿದ್ದ ಪೊಲೀಸರು, ಇತರರ ಗುರುತು ಕಳವು ಮಾಡಿ ಕಂಪ್ಯೂಟರ್ ಉಪಕರಣಗಳನ್ನು ಬಳಸಿ ಹಣ ಪಡೆದು ವಂಚನೆ ಮಾಡಿದ ತಮಿಳುನಾಡು ಮೂಲದ ವಿದ್ಯಾರ್ಥಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಎಫ್ ಐಆರ್ ದಾಖಲಿಸಿಕೊಂಡಿದ್ದರು.
ಈ ಸಂಬಂಧ ಕಳೆದ ಫೆಬ್ರವರಿ 14ರಂದು ತಮಿಳುನಾಡು ಮೂಲದ ವಿದ್ಯಾರ್ಥಿಗೆ ವಿಚಾರಣೆಗೆ ಹಾಜರಾಗುವಂತೆ ಆಡುಗೋಡಿ ಪೊಲೀಸ್ ಠಾಣೆ ಅಧಿಕಾರಿಗಳು ವಾಟ್ಸ್ ಆ್ಯಪ್ ಮೂಲಕ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ