07/03/2026

Law Guide Kannada

Online Guide

ಜಾಮೀನು ಪಡೆಯಲು ನಕಲಿ ದಾಖಲೆ ಸಲ್ಲಿಕೆ ತಡೆಗೆ ಹೈಕೋರ್ಟ್ ಕಟ್ಟು ನಿಟ್ಟಿನ ಕ್ರಮ: ನೂತನ ಗೈಡ್ ಲೈನ್ಸ್ ಹೀಗಿದೆ ನೋಡಿ…!

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಭದ್ರತೆಗಾಗಿ ನಕಲಿ ದಾಖಲೆ ಸಲ್ಲಿಸುತ್ತಿರುವ ಪ್ರಕರಣಗಳ ತಡೆಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಕರ್ನಾಟಕ ಹೈಕೋರ್ಟ್ ನೂತನ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.

ಈಗಾಗಲೇ ಸಾವನ್ನಪ್ಪಿರುವ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಜಮೀನಿನ ನಕಲಿ ದಾಖಲೆಗಳನ್ನು ನೀಡಿ ಜಾಮೀನು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ನ್ಯಾಯಾಲಯಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡಿಕೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಈ ಸಂಬಂಧವಾಗಿ ಅಗತ್ಯ ತಾಂತ್ರಿಕ ನೆರವು ನೀಡುವಂತೆ ಕಂದಾಯ ಇಲಾಖೆ ಮತ್ತು ಆಧಾರ್ ಕಾರ್ಡ್ ನೀಡುವ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೂ ಸೂಚನೆ ನೀಡಲಾಗಿದೆ.

ರಾಜ್ಯ ಹೈಕೋರ್ಟ್ ಹೋರಡಿಸಿರುವ ಗೈಡ್ ಲೈನ್ಸ್ ಅಂಶಗಳು ಹೀಗಿವೆ…
ಜಾಮೀನುಗಾಗಿ ಬರುವ ಶ್ಯೂರಿಟಿಯ ಆಸ್ತಿ ಪತ್ರಗಳನ್ನು ಸರ್ಕಾರದ ವೆಬ್ ಸೈಟ್ಗಳಾದ ಕಾವೇರಿ ಮತ್ತು ಭೂಮಿ ತಂತ್ರಾಂಶದಲ್ಲಿ ಪರಿಶೀಲನೆ ಮಾಡಬೇಕು. ಅಗತ್ಯ ಬಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮತ್ತೊಮ್ಮೆ ಖಾತರಿಪಡಿಸಿಕೊಳ್ಳಬೇಕು.

ನಗದು ಶ್ಯೂರಿಟಿ ನೀಡಿದಾಗ ಅಂತಹ ವ್ಯಕ್ತಿ ನೀಡಿರುವ ವಿಳಾಸದ ಸ್ಥಳದಲ್ಲಿ ಇದ್ದಾರೆಯೇ ಎಂಬ ಕುರಿತು ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ಆರೋಪಿತರು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಕಲಿ ಆಧಾರ್ ಸಲ್ಲಿಸುವುದನ್ನು ತಡೆಯಲು ಆಧಾರ್ ಕಾರ್ಡ್ ಪ್ರಾಧಿಕಾರ ಅಗತ್ಯ ಸಹಕಾರ ನೀಡಬೇಕು. ಹಾಗೆಯೇ ಅಗತ್ಯ ಸೌಲಭ್ಯಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ನ್ಯಾಯಾಲಯಗಳಿಗೆ ದೊರಕಿಸಿಕೊಡಬೇಕು.

ಸಾಕ್ಷಿದಾರರ ಭಾವಚಿತ್ರ, ಸಹಿ, ಹೆಬ್ಬರಳಿನ ಗುರುತನ್ನು ಹಾಕಿ ದೃಢೀಕರಣ ಮಾಡಿರುವ ದಾಖಲೆಯನ್ನು ಪರಿಗಣಿಸಬೇಕು. ಜತೆಗೆ ಸ್ವಯಂ ದೃಢೀಕರಿಸಿರುವ ಆಧಾರ್ ಕಾರ್ಡ್ ನಕಲು ಪ್ರತಿ ಸಲ್ಲಿಸಬೇಕು. ಶ್ಯೂರಿಟಿ ನೀಡುವವರ ಕುರಿತು ನ್ಯಾಯಾಲಯಗಳು ತಮ್ಮ ಸಾಫ್ಟ್ ವೇರ್ ನಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಹೆಸರು, ಅಪರಾಧ ಸಂಖ್ಯೆ, ಆರೋಪಿತರ ಹೆಸರು ಸೇರಿದಂತೆ ವಿವರಗಳನ್ನು ದಾಖಲಿಸಿಕೊಳ್ಳಬೇಕು.

ಉದ್ಯೋಗಿಯಾಗಿರುವ ವ್ಯಕ್ತಿ ಶ್ಯೂರಿಟಿ ನೀಡಿದ್ದಲ್ಲಿ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಐಡಿ ಮತ್ತು ವೇತನ ಚೀಟಿ ಸಲ್ಲಿಸಬೇಕು. ಇದನ್ನು ಉದ್ಯೋಗದಾತ ಸಂಸ್ಥೆಯ ಉಸ್ತುವಾರಿ ಸಹಿಯೊಂದಿಗೆ ದೃಢೀಕರಿಸಬೇಕು.

ಶ್ಯೂರಿಟಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಸಹಿ, ಹೆಬ್ಬೆರಳಿನ ಗುರುತು, ಭಾವಚಿತ್ರ ಸಹಿತ ದಾಖಲೆಯನ್ನು ಪಡೆದುಕೊಳ್ಳಬೇಕು. ನ್ಯಾಯಾಲಯಗಳು ಶ್ಯೂರಿಟಿದಾರನ ಸಂಪೂರ್ಣ ಹೆಸರು, ತಂದೆಯ ಹೆಸರು, ವಯಸ್ಸು, ವೃತ್ತಿ ಸೇರಿದಂತೆ ಸಂಪೂರ್ಣ ಅಂಚೆ ವಿಳಾಸವನ್ನು ದಾಖಲಿಸಿಕೊಳ್ಳಬೇಕು.

ಜಿಲ್ಲಾ ಪ್ರಧಾನ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ವಾರ್ಷಿಕ ತಪಾಸಣೆ ವೇಳೆ ಜಾಮೀನುದಾರರ ನೋಂದಣಿಯನ್ನು ಪರಿಶೀಲನೆ ಮಾಡಬೇಕು. ವಿವಿಧ ಪ್ರಕರಣಗಳಲ್ಲಿ ಶ್ಯೂರಿಟಿದಾರರ ಹೇಳಿಕೆಗಳನ್ನು ಗಮನಿಸುತ್ತಿರಬೇಕು.

ಈ ಮಾರ್ಗಸೂಚಿಗಳ ಕುರಿತು ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆದು ಕ್ರಿಮಿನಲ್ ಪ್ರಕರಣದಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳಿಗೆ ಸುತ್ತೋಲೆಯನ್ನು ಹೊರಡಿಸಬೇಕು.

ನ್ಯಾಯಾಲಯಗಳ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಅವರು ಸೆಂಟ್ರಲ್ ಪ್ರೊಜೆಕ್ಟ್ ಕೊ ಆರ್ಡಿನೇಟರ್ (ಸಿಪಿಸಿ) ಮೂಲಕ ಎಲ್ಲ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

ಶ್ಯೂರಿಟಿ ನೀಡುವುದಕ್ಕೆ ಕೋರ್ಟ್ ಗಳಿಗೆ ಬರುವವರು ಈ ಹಿಂದೆ ಯಾವುದಾದರೂ ಪ್ರಕರಣದಲ್ಲಿ ಶ್ಯೂರಿಟಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೆ, ಶ್ಯೂರಿಟಿಗಾಗಿ ಪದೇ ಪದೇ ಹಾಜರಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.