ಖಾಜಿ , ಕಾಜಿಯತ್, ಷರಿಯಾ ನ್ಯಾಯಾಲಯಗಳಿಗೆ ಕಾನೂನಿನ ಮಾನ್ಯತೆ ಇಲ್ಲ -ಸುಪ್ರೀಂಕೋರ್ಟ್

ನವದೆಹಲಿ: ಖಾಜಿ (ದಾರುಲ್ ಕಾಜಾ), ಕಾಜಿಯತ್, ಷರಿಯಾ ನ್ಯಾಯಾಲಯಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ನ್ಯಾಯಾಲಯದಂತೆ ಕಾರ್ಯ ನಿರ್ವಹಿಸಿದರೂ ಇವುಗಳು ನೀಡುವ ತೀರ್ಪನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಸೆಕ್ಷನ್ 125ರ ಅಡಿಯಲ್ಲಿ ಮುಸ್ಲಿಂ ಮಹಿಳೆಯ ಜೀವನಾಂಶ ಅರ್ಜಿಯನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಸ್ಲಿಂ ಮಹಿಳೆಯ ಜೀವನಾಂಶ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಖಾಜಿ (ದಾರುಲ್ ಕಾಜಾ), ಕಾಜಿಯತ್, ಷರಿಯಾ ನ್ಯಾಯಾಲಯ ನೀಡುವ ತೀರ್ಪನ್ನು ಯಾರ ಮೇಲೂ ಒತ್ತಾಯಪೂರ್ವಕವಾಗಿ ಪಾಲಿಸುವಂತೆ ಮಾಡಲಾಗುವುದಿಲ್ಲ. ಖಾಜಿ (ದಾರುಲ್ ಕಾಜಾ), ಕಾಜಿಯತ್, ಷರಿಯಾ ನ್ಯಾಯಾಲಯ ನೀಡುವ ತೀರ್ಪು ಕಾನೂನಿಗೆ ವಿರುದ್ದವಾಗಿಲ್ಲದಿದ್ದರೆ ಪಾಲಿಸಬಹುದು. ಆದರೆ ಇದನ್ನು ಸ್ವೀಕಾರ ಮಾಡುವ ಆಯ್ಕೆ ಸಂಬಂಧಪಟ್ಟವರಿಗೆ ಸೇರಿರುತ್ತದೆ ಎಂದು ತಿಳಿಸಿದೆ.
ಹಾಗೆಯೇ 2014ರ ವಿಶ್ವ ಲೋಚನ್ ಮದನ್ – ಯೂನಿಯನ್ ಆಫ್ ಇಂಡಿಯಾ ಪ್ರಕರಣದ ಬಗ್ಗೆ ಉಲ್ಲೇಖಿಸಿದ ನ್ಯಾಯಾಲಯ ಮುಸ್ಲಿಂ ವ್ಯಕ್ತಿಯೊಬ್ಬರು ಆರಂಭದಲ್ಲಿ ಖಾಜಿ ನ್ಯಾಯಾಲಯ ಮತ್ತು ಕಾಜಿಯತ್ ನ್ಯಾಯಾಲಯದಲ್ಲಿ ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಕುಟುಂಬ ನ್ಯಾಯಾಲಯವು ಜೀವನಾಂಶವನ್ನು ನಿರಾಕರಿಸಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಶಹಜಹಾನ್ ಎಂಬವರು 2018ರ ಆಗಸ್ಟ್ 3ರಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ನ್ಯಾಯ ಪೀಠವು ವಿಚಾರಣೆ ನಡೆಸುತ್ತಿದೆ. ಕೌಟುಂಬಿಕ ನ್ಯಾಯಾಲಯ ಅವರ ಇಬ್ಬರು ಮಕ್ಕಳಿಗೆ ಕೇವಲ 2,500 ರೂ.ಗಳನ್ನು ಮಾತ್ರ ನೀಡಲು ಹೇಳಿದೆ.
ಇಸ್ಲಾಮಿಕ್ ಪದ್ಧತಿಗಳ ಪ್ರಕಾರ 2002ರಲ್ಲಿ ವಿವಾಹವಾದ ಇವರಿಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. ಪತಿ ಮೋಟಾರ್ ಸೈಕಲ್ ಮತ್ತು 50,000 ರೂ. ಗಳ ಬೇಡಿಕೆಯನ್ನು ಇರಿಸಿದ್ದು, ಅದನ್ನು ನೀಡಲು ಸಾಧ್ಯವಾಗದ ಕಾರಣ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಶಹಜಹಾನ್ ಆರೋಪಿಸಿದ್ದಾರೆ.
ಇನ್ನು ವಿಚಾರಣೆ ನಡೆಸಿದ್ದ ಕುಟುಂಬ ನ್ಯಾಯಾಲಯವು ಇದು ಎರಡನೇ ವಿವಾಹವಾಗಿರುವುದರಿಂದ ಪುರುಷ ವರದಕ್ಷಿಣೆ ಬೇಡಿಕೆಯಿಡಲು ಸಾಧ್ಯವಿಲ್ಲ. ಯಾಕೆಂದರೆ ಅವನು ತನ್ನ ಮನೆಗೆ ಮಹಿಳೆ ಆಧಾರವಾಗಿ ಇರಬೇಕು ಎಂದು ಬಯಸುತ್ತಾನೆ ಎಂದು ಹೇಳಿದೆ. ಇದರಲ್ಲಿ ಯಾವುದೇ ವಿಚಾರ ಪರಾಮರ್ಶೆ ನಡೆದಿಲ್ಲ. ಇದು ಕೇವಲ ಊಹೆಯನ್ನು ಆಧರಿಸಿದೆ. ನ್ಯಾಯಾಲಯವು ಸಮಾಜಕ್ಕೆ ನೈತಿಕತೆ ಮತ್ತು ನೀತಿಶಾಸ್ತ್ರ ಬೋಧಿಸುವ ಸಂಸ್ಥೆಯಲ್ಲ. ಇದನ್ನು ಕುಟುಂಬ ನ್ಯಾಯಾಲಯ ನನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ನ್ಯಾಯಪೀಠ ತಿಳಿಸಿದೆ.
ದಂಪತಿಯು 2005ರಲ್ಲಿ ರಾಜಿ ಮಾಡಿಕೊಂಡಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ನ್ಯಾಯ ಪೀಠ ರಾಜಿ ಪತ್ರದಲ್ಲಿ ಯಾವುದೇ ತಪ್ಪೊಪ್ಪಿಗೆ ದಾಖಲಾಗಿಲ್ಲ. ಹೀಗಾಗಿ ವಿಚ್ಛೇದನ ಮೊಕದ್ದಮೆಯನ್ನು ರಾಜಿಯ ಆಧಾರದ ಮೇಲೆ ವಜಾಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿತು.
ಮಹಿಳೆಯ ಪತಿ ಬಿಎಸ್ಎಫ್ ನಲ್ಲಿ ಆರಕ್ಷಕ (ಕಾನ್ಸ್ಟೇಬಲ್) ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ 15,000 ರೂ. ಆದಾಯವಿತ್ತು. ಹೀಗಾಗಿ ಮೇಲ್ಮನವಿದಾರ ಪತ್ನಿಗೆ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ. ಕುಟುಂಬ ನ್ಯಾಯಾಲಯದಲ್ಲಿ ಜೀವನಾಂಶ ಅರ್ಜಿ ಸಲ್ಲಿಸಿದ ದಿನಾಂಕದಿಂದ ಮಾಸಿಕ 4,000 ರೂ.ಗಳನ್ನು ಜೀವನಾಂಶವಾಗಿ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.
ಮಕ್ಕಳಿಗೆ ನೀಡಲಾಗುವ 2,500 ರೂ. ಜೀವನಾಂಶದಲ್ಲಿ ಮಗಳಿಗೆ 18 ವರ್ಷ ತುಂಬಿರುವುದರಿಂದ ಆಕೆಯ ಪರವಾಗಿ ನೀಡಲಾದ ಜೀವನಾಂಶವನ್ನು ಆಕೆಯ 18 ವರ್ಷದ ಹುಟ್ಟುಹಬ್ಬದವರೆಗೆ ಮಾತ್ರ ಪಾವತಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ಹಣ ಪಾವತಿಸಿದ್ದರೆ ಈ ಮೊತ್ತವನ್ನು ಸರಿಹೊಂದಿಸಿ ಬಾಕಿ ಇರುವುದನ್ನು ನಾಲ್ಕು ತಿಂಗಳೊಳಗೆ ಕುಟುಂಬ ನ್ಯಾಯಾಲಯದಲ್ಲಿ ಠೇವಣಿ ಮಾಡುವಂತೆ ನ್ಯಾಯಾಲಯವು ಅರ್ಜಿದಾರ ಮಹಿಳೆಯ ಪತಿಗೆ ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ