KPCL ನೇಮಕಾತಿ: ಮೇಲ್ಮನವಿ ವಜಾ, ಮರುಪರೀಕ್ಷೆ ನಡೆಸಲು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) 404 ಸಹಾಯಕ ಎಂಜಿನಿಯರ್ (ಎ.ಇ) ಮತ್ತು ಕಿರಿಯ ಎಂಜಿನಿಯರ್ (ಜೆ.ಇ) ನೇಮಕಾತಿಗೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನ ವಜಾಗೊಳಿಸಿದ ಸುಪ್ರೀಂಕೋರ್ಟ್ ನಾಲ್ಕು ತಿಂಗಳ ಒಳಗೆ ಹೊಸದಾಗಿ ಮರುಪರೀಕ್ಷೆ ನಡೆಸುವಂತೆ ಆದೇಶಿಸಿದೆ.
ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2024ರ ಮೇ 8ರಂದು ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಆದರೆ ನೇಮಕಾತಿ ಅಧಿಸೂಚನೆಯಲ್ಲಿ ಇಲ್ಲದಿದ್ದರೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆಯಲ್ಲಿ ಋಣಾತ್ಮಕ ಅಂಕ ಪದ್ದತಿ ಅನುಸರಿಸಿದ್ದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿತ್ತು.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎನ್. ನವೀನ್ ಕುಮಾರ್ ಸೇರಿದಂತೆ ನಾಲ್ವರು ರಿಟ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ನೇಮಕಾತಿ ಪಟ್ಟಿ ರದ್ದುಪಡಿಸಿ, ಶೀಘ್ರವೇ ಮರು ಪರೀಕ್ಷೆ ನಡೆಸುವಂತೆ ಕೆಪಿಸಿಎಲ್ ಮತ್ತು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಮರುಪರೀಕ್ಷೆಗೆ ಆದೇಶಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ‘ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಮಾಹಿತಿ ಬಂದಿದೆ. ಈ ಹುದ್ದೆಗಳ ನೇಮಕಾತಿಗೆ ನಾವು (ಕೆಇಎ) ಪರೀಕ್ಷೆ ನಡೆಸಿದ್ದೆವು. ಮರು ಪರೀಕ್ಷೆ ನಡೆಸಲು ಇಂಧನ ಇಲಾಖೆ ನಮಗೆ ಸೂಚಿಸಬಹುದು ಅಥವಾ ಕೆಪಿಎಸ್ಸಿ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬಹುದು’ ಎಂದಿದ್ದಾರೆ.
2018ರಲ್ಲಿ ಕೆಪಿಸಿಎಲ್ ಖಾಲಿ ಇದ್ದ ಸಿವಿಲ್, ಎಲೆಕ್ಟಿಕಲ್, ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಮೆಕ್ಯಾನಿಕಲ್ ವಿಭಾಗಗಳ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಕೆಮಿಸ್ಟ್, ರಾಸಾಯನಿಕ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಿತ್ತು. ಪರೀಕ್ಷೆಯಲ್ಲಿನ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮೊದಲಾದ ವಿಚಾರಕ್ಕೆ ಕೋರ್ಟ್ ಅದನ್ನು ರದ್ದುಪಡಿಸಿತ್ತು.
ಕೋರ್ಟ್ ಆದೇಶದಂತೆ ಮರು ಪರೀಕ್ಷೆ ನಡೆಸುವುದಾಗಿ 2018ರ ಜೂನ್ನಲ್ಲೇ ಅಭ್ಯರ್ಥಿಗಳಿಗೆ ಭರವಸೆ ನೀಡಿದ್ದ ಕೆಪಿಎಸಿಎಲ್, ಆರು ವರ್ಷಗಳ ಬಳಿಕ 2024ರ ಫೆಬ್ರವರಿಯಲ್ಲಿ ಕೆಇಎ ಮೂಲಕ ಒಟ್ಟು 622 ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸಿತ್ತು. ಈ ಪೈಕಿ, 404 ಸಹಾಯಕ ಎಂಜಿನಿಯರ್ (ಎ.ಇ) ಮತ್ತು ಕಿರಿಯ ಎಂಜಿನಿಯರ್ (ಜೆ.ಇ) ನೇಮಕಾತಿ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
