ಜಮೀನು ಭೂಸ್ವಾಧೀನಕ್ಕೆ ಪರಿಹಾರ ಪಡೆದಿದ್ರೂ ಮತ್ತೆ ಮತ್ತೆ ಅರ್ಜಿ : ಕೋರ್ಟ್ ಅಸಮಾಧಾನ, 10 ಲಕ್ಷ ರೂ. ದಂಡ
ಬೆಂಗಳೂರು: ಭೂಸ್ವಾಧೀನ ಜಮೀನಿಗೆ ಪರಿಹಾರ ಪಡೆದಿದ್ದರೂ ಸಹ ಮತ್ತೆ ಮತ್ತೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ಇದೊಂದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ಚಾಟಿ ಬೀಸಿ 10 ಲಕ್ಷ ರೂ. ದಂಡ ವಿಧಿಸಿದೆ.
ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಪಡೆದ ಬಳಿಕವೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ 7 ಬಾರಿ ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿರುವುದನ್ನು ಮರೆಮಾಚಿ ಮತ್ತೆ 8ನೇ ಸಲ ನಗರದ ದೊಡ್ಡಬಸ್ತಿ ಮುಖ್ಯರಸ್ತೆಯ ಭುವನೇಶ್ವರಿ ನಗರದ ಗಂಗಮ್ಮ ಮತ್ತು ಕುಟುಂಬದವರು ಅರ್ಜಿ ಸಲ್ಲಿಸಿದ್ದರು. ಈ ಕುಟುಂಬದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಇದೊಂದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ಕಿಡಿಕಾರಿ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೆ ನಾಲ್ಕು ವಾರಗಳಲ್ಲಿ 10 ಲಕ್ಷ ರೂ. ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಲು ಸೂಚನೆ ನೀಡಿತು.
ಪ್ರಕರಣ ಸಂಬಂಧ ಮೊದಲ ಅರ್ಜಿ 1994ರಲ್ಲಿ ಸಲ್ಲಿಕೆಯಾಗಿದ್ದು, ಈವರೆಗೂ ಎಂಟು ಬಾರಿ ಕಾನೂನು ಹೋರಾಟ ನಡೆದಿದೆ. ಎಲ್ಲ ಅರ್ಜಿಗಳು ವಜಾಗೊಂಡಿವೆ. ಈ ಅಂಶವನ್ನು ಕೊನೆಯ ಅರ್ಜಿಯಲ್ಲಿ ಮರೆ ಮಾಚಲಾಗಿದೆ. ಆದ್ದರಿಂದ ಅರ್ಜಿದಾರರು ತಪ್ಪಿತಸ್ಥರಾಗಿದ್ದು, ಶುದ್ಧಹಸ್ತದಿಂದ ನ್ಯಾಯಾಲಯಕ್ಕೆ ಬಂದಿಲ್ಲ. ವಂಚನೆ, ತಪ್ಪು ಮಾಹಿತಿ ನೀಡಿ ನ್ಯಾಯಾಲಯಕ್ಕೆ ಬರುವವರು ನ್ಯಾಯಾಂಗ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಂಳಕಗೊಳಿಸಿದಂತಾಗಲಿದೆ” ಎಂದು ನ್ಯಾಯಪೀಠ ಹೇಳಿದೆ.
”ಇಂತಹ ಆದೇಶಗಳು ಇತರರಿಗೆ ಎಚ್ಚರಿಕೆ ನೀಡುವಂತಿರಬೇಕು. ನ್ಯಾಯಾಲಯವನ್ನು ಆಟದ ಮೈದಾನದಂತೆ ಪರಿಗಣಿಸುವ ಬೇಜವಾಬ್ದಾರರಿಗೆ ದಂಡದ ಮೂಲಕ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಈ ಅರ್ಜಿ ಪುರಸ್ಕರಿಸಿದಲ್ಲಿಮತ್ತೊಮ್ಮೆ ನ್ಯಾಯಾಂಗ ಹೋರಾಟ ಮುಂದುವರಿಸಲು ಅವಕಾಶ ನೀಡಿದಂತಾಗಲಿದ್ದು, ನ್ಯಾಯಾಂಗ ಪ್ರಕ್ರಿಯೆ ದುರುಪಯೋಗಕ್ಕೆ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಅರ್ಜಿಯನ್ನು ದಂಡ ವಿಧಿಸಿ ವಜಾಗೊಳಿಸಲಾಗುತ್ತಿದೆ” ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 26ರಲ್ಲಿದ್ದ ಸರಕಾರಿ ಭೂಮಿಯಲ್ಲಿ ವೆಂಕಟೇಶ್ ಬೋವಿ ಮತ್ತು ಹನುಮಂತ ಬೋವಿ ಎಂಬುವವರು ಅನಧಿಕೃತವಾಗಿ ಬೇಸಾಯ ಮಾಡುತ್ತಿದ್ದರು. ಬಳಿಕ ಸಾಗುವಳಿ ಮಾಡುತ್ತಿದ್ದ ಆಧಾರದಲ್ಲಿಅರ್ಜಿದಾರರ ಹೆಸರಿಗೆ ಜಮೀನು ಮಂಜೂರು ಮಾಡಲಾಗಿತ್ತು. ಈ ಜಮೀನು ಇಬ್ಬರ ಹೆಸರಿಗೆ ವರ್ಗಾವಣೆಗೊಂಡಿದ್ದವು. ಉದ್ದೇಶಿತ ಜಮೀನನ್ನು ಗವಿಪುರಂ ಎಕ್ಸ್ಟೆನ್ಶನ್ ಹೌಸ್ ಬಿಲ್ಡಿಂಗ್ ಕೋಆಪರೇಟಿವ್ ಸೊಸೈಟಿಯಿಂದ ಬಡಾವಣೆ ನಿರ್ಮಾಣಕ್ಕಾಗಿ 1986ರಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 1987ರಲ್ಲಿಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಅದರಂತೆ ಪ್ರತಿ ಎಕರೆಗೆ 65 ಸಾವಿರ ರೂ. ಮತ್ತು 15 ಸಾವಿರ ರೂ. ಬಡ್ಡಿ ಸೇರಿಸಿ ಪರಿಹಾರ ನೀಡಲಾಗಿತ್ತು. ಈ ಪರಿಹಾರ ಮೊತ್ತವನ್ನು ಭೂಮಾಲೀಕರ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಈ ನಡುವೆ ವೆಂಕಟೇಶ್ ಬೋವಿ ಮತ್ತು ಹನುಮಂತ ಬೋವಿ ಮೃತಪಟ್ಟಿದ್ದರು. ಅದಾದ ಬಳಿಕ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಕೋರಿ ಮೃತರ ವಾರಸುದಾರರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು.
1992ರಲ್ಲಿ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ವಿಶೇಷ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆ ಮನವಿಯಂತೆ ವಿಶೇಷ ಜಿಲ್ಲಾಧಿಕಾರಿಗಳು 1993ರಲ್ಲಿಉದ್ದೇಶಿತ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲು ಶಿಫಾರಸು ಮಾಡಿದ್ದರು. ಜತೆಗೆ, ಅಧಿಸೂಚನೆ ಹೊರಡಿಸಲು ಸೂಚನೆ ನೀಡಿದ್ದರು. ಆದರೆ,ಆ ಶಿಫಾರಸು ಜಾರಿಯಾಗಿರಲಿಲ್ಲ. ಆನಂತರ ಭೂಸ್ವಾಧೀನ ಕೈ ಬಿಡುವಂತೆ 1993 ರಿಂದ 2025ರವರೆಗೂ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದು, ಇದೀಗ ಈ ಕುಟುಂಬದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿ ದಂಡ ವಿಧಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
