ಮೂಲ ಮಾಲೀಕರ ಉತ್ತರಾಧಿಕಾರಿಗಳನ್ನು ಪ್ರತಿವಾದಿ ಮಾಡದಿದ್ರೆ ಭೂನ್ಯಾಯ ಮಂಡಳಿ ಆದೇಶ ಸಮರ್ಥನೀಯವಲ್ಲ- ಹೈಕೋರ್ಟ್

ಬೆಂಗಳೂರು: ಮೂಲ ಮಾಲೀಕರ ಉತ್ತರಾಧಿಕಾರಿಗಳನ್ನು ಪ್ರತಿವಾದಿ ಮಾಡದಿದ್ರೆ ಭೂನ್ಯಾಯ ಮಂಡಳಿ ಆದೇಶ ಸಮರ್ಥನೀಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
“ಡಾ. ಕೆ. ರವೀಂದ್ರನಾಥ ಶೆಟ್ಟಿ ಮತ್ತಿತರರು ಗಿs ಕರ್ನಾಟಕ ರಾಜ್ಯ ಮತ್ತಿತರರು” ಪ್ರಕರಣದಲ್ಲಿ ಅರ್ಜಿದಾರರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್. ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಗೇಣಿದಾರರಿಗೆ ಅನುಭೋಗದ (ಆಕ್ಯುಪೆನ್ಸಿ ರೈಟ್ಸ್) ಹಕ್ಕುಗಳನ್ನು ನೀಡುವ ಆದೇಶದಲ್ಲಿ ಮೂಲ ಮಾಲೀಕರ ಕಾನೂನಾತ್ಮಕ ಉತ್ತರಾಧಿಕಾರಿಗಳನ್ನು ಪಕ್ಷಕಾರರನ್ನಾಗಿ ಮಾಡದಿದ್ದರೆ, ಅಂತಹ ಆದೇಶ ಸಮರ್ಥನೀಯವಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಮೂಲ ಮಾಲೀಕರು ಮೃತಪಟ್ಟಿದ್ದು, ಅವರ ಕಾನೂನು ಉತ್ತರಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿಲ್ಲ. ಇದರಿಂದ ನ್ಯಾಯದಾನದ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳುವ ಅವರ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ. ಅವರನ್ನು ಪ್ರತಿವಾದಿಗಳನ್ನಾಗಿ ಮಾಡದೆ ಅವರಿಗೆ ತಕರಾರನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಹಾಗೆಯೇ ಗೇಣಿದಾರರ ಪರವಾಗಿ ಭೂಮಿಗೆ ಸಂಬಂಧಿಸಿದಂತೆ ಸ್ವಾಧೀನದ ಹಕ್ಕನ್ನು ನೀಡಿದ್ದ ಭೂ ನ್ಯಾಯಮಂಡಳಿಯ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದೆ. ಭೂ ಮಾಲೀಕರ ವಾರಸುದಾರರಾದ ಅರ್ಜಿದಾರರ ತಕರಾರನ್ನು ಆಲಿಸಲು ಮತ್ತು ಅವರ ಪರವಾಗಿ ಸಾಕ್ಷ್ಯವನ್ನು ಮುನ್ನಡೆಸಲು ಸೂಕ್ತ ಅವಕಾಶವನ್ನು ನೀಡುವಂತೆ ಹೈಕೋರ್ಟ್ ಭೂ ನ್ಯಾಯಮಂಡಳಿಗೆ ನಿರ್ದೇಶನ ನೀಡಿದ್ದು, ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪೂರೈಸಿದ ಬಳಿಕವೇ ಸಮರ್ಪಕ ಆದೇಶ ಹೊರಡಿಸುವಂತೆ ಹೈಕೋರ್ಟ್ ನಿರ್ದೇಶನದಲ್ಲಿ ತಿಳಿಸಿದೆ.
ಏನಿದು ಪ್ರಕರಣ:
1974ರಲ್ಲೇ ಮೂಲ ಮಾಲೀಕರು ನಿಧನರಾಗಿದ್ದು, ಅವರಿಗೆ ಸೇರಿದ 63 ಸೆಂಟ್ಸ್ ಜಮೀನಿಗೆ ಸಂಬಂಧಿಸಿದಂತೆ ಅನುಭೋಗದ ಹಕ್ಕು ಪಡೆದಿರುವ ಹಿಡುವಳಿದಾರರು ಭೂ ನ್ಯಾಯಮಂಡಳಿಯಲ್ಲಿ ಅರ್ಜಿ ಹಾಕಿದ್ದರು.
ಆ ಸಂದರ್ಭದಲ್ಲಿ ಮೂಲ ಮಾಲಕರು ಮೃತಪಟ್ಟಿದ್ದರೂ ಅವರ ಕಾನೂನಾತ್ಮಕ ವಾರಸುದಾರರನ್ನು ಪ್ರತಿವಾದಿಗಳನ್ನಾಗಿ ಮಾಡದೆ ಮೃತ ಮಾಲೀಕರನ್ನೇ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಭೂ ನ್ಯಾಯಮಂಡಳಿಗೆ ಪ್ರತಿವಾದಿಗಳು ಮೃತಪಟ್ಟಿರುವ ಮಾಹಿತಿಯನ್ನು ಮುಚ್ಚಿಡಲಾಗಿದೆ ಮತ್ತು ಕಾನೂನಾತ್ಮಕ ವಾರಸುದಾರರಾದ ತಮಗೆ ತಕರಾರು ಸಲ್ಲಿಸಲು ಸಾಧ್ಯವಾಗಿಲ್ಲ ಮತ್ತು ನಮ್ಮ ಪರವಾಗಿ ಸಾಕ್ಷ್ಯ ನೀಡಲು ಸಮರ್ಪಕ ಅವಕಾಶ ದೊರೆತಿಲ್ಲ ಎಂದು ವಾದಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ