05/03/2026

Law Guide Kannada

Online Guide

ವೃತ್ತಿಪರ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರನ್ನು ಸಾಕ್ಷಿಯಾಗಿ ಪರಿಗಣನೆ ಸಾಧ್ಯವಿಲ್ಲ- ಹೈಕೋರ್ಟ್

ನವದೆಹಲಿ: ವೃತ್ತಿಪರ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರು ತನಿಖಾಧಿಕಾರಿಗಳೊಂದಿಗೆ ಸಂವಹನ ನಡೆಸುವುದು ಅಥವಾ ಕಕ್ಷಿದಾರರ ಪರವಾಗಿ ದಾಖಲೆಗಳನ್ನು ಸಲ್ಲಿಸುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಅವರನ್ನು ಸಾಕ್ಷಿಗಳಾಗಿಯೂ ಅಥವಾ ಅನುಮಾನಿತರಾಗಿಯೂ ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಾ. ಸ್ವರ್ಣಕಾಂತ್ ಶರ್ಮ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಕೇಂದ್ರೀಯ ತನಿಖಾ ದಳ – ಸಿಬಿಐ ವಕೀಲರಾದ ಸಚಿನ್ ಬಾಜಪೇಯಿ ಅವರಿಗೆ ನೀಡಿದ್ದ ನೋಟಿಸ್ ಅನ್ನು ಕೋರ್ಟ್ ತಡೆ ಹಿಡಿದಿದೆ.

ವಕೀಲರನ್ನು ಸಾಕ್ಷಿಗಳೊಂದಿಗೆ ಸಮಾನೀಕರಿಸುವುದು ಕಾನೂನು ವೃತ್ತಿಯ ಸ್ವಾತಂತ್ರಕ್ಕೆ ಧಕ್ಕೆಯಾಗುವುದಲ್ಲದೆ, ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಿಗೆ ವಿರುದ್ಧವಾಗುತ್ತದೆ. ವಕೀಲ-ಕಕ್ಷಿಗಾರ ಸಂಬಂಧವು ರಹಸ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಆದರೆ ವಕೀಲರಿಗೆ ಪ್ರಕರಣದ ವಿಷಯಗಳು ತಿಳಿದಿವೆ ಎಂಬ ಕಾರಣ ಮಾತ್ರದಿಂದಲೇ, ಅವರು ಆ ಪ್ರಕರಣದ ವಾಸ್ತವಾಂಶಗಳಿಗೆ ಸಂಬಂಧಿಸಿದ ಸಾಕ್ಷಿಯಾಗುತ್ತಾರೆ ಎನ್ನುವುದಿಲ್ಲ ಎಂದು ಕೋರ್ಟ್ ಗಮನಿಸಿತು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ.ಎನ್.ಎಸ್.ಎಸ್.), 2023 ಅಡಿಯಲ್ಲಿ ವಕೀಲ ಸಚಿನ್ ಬಾಜಪೇಯಿ ಅವರಿಗೆ ನೀಡಿದ ಸಿಬಿಐ ನೋಟಿಸ್ ಸ್ಥಾಪಿತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಮನಗಂಡು ನ್ಯಾಯಾಲಯ ಅದನ್ನು ತಡೆಹಿಡಿದಿದೆ.

ಈ ತೀರ್ಪು ವಕೀಲ-ಕಕ್ಷಿಗಾರ ಗೌಪ್ಯ ಸಂವಹನ ಹಾಗೂ ವಕೀಲರ ಸ್ವಾತಂತ್ರದ ರಕ್ಷಣೆಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಗ್ರಾಹಕರ ಪರವಾಗಿ ದಾಖಲೆಗಳು ಅಥವಾ ಇಮೇಲ್ಗಳನ್ನು ಕಳುಹಿಸುವಂತಹ ರೂಢಿಗತ ವಕೀಲರ ಚಟುವಟಿಕೆಗಳನ್ನು ಆಧಾರವಾಗಿಸಿಕೊಂಡು ತನಿಖಾ ಸಂಸ್ಥೆಗಳು ವಕೀಲರನ್ನು ಸಾಕ್ಷಿಗಳಾಗಿ ಕರೆಯುವ ಪವೃತ್ತಿಗೆ ಈ ತೀರ್ಪು ವಿರುದ್ಧವಾದ ಪೂರ್ವ ನಿದರ್ಶನವಾಗಿದೆ. (precedent). ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ವಕೀಲರನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಡಾ. ಸ್ವರ್ಣಕಾಂತ್ ಶರ್ಮ ಅಭಿಪ್ರಾಯಪಟ್ಟರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.