20/05/2025

Law Guide Kannada

Online Guide

ಲಿವ್ ಇನ್ ಎಂಬುದು ಎರವಲು ಸಂಬಂಧ: ಭಾರತೀಯ ನಂಬಿಕೆಗೆ ವಿರುದ್ಧ- ಹೈಕೋರ್ಟ್

ಬಿಲಾಸಪುರ: ಲಿವ್ ಇನ್ ಎಂಬುದು ಎರವಲು ಸಂಬಂಧವಾಗಿದ್ದು ಭಾರತೀಯ ನಂಬಿಕೆಗೆ ಇದು ವಿರುದ್ಧವಾಗಿದೆ ಎಂದು ಛತ್ತೀಸಗಢ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

36 ವರ್ಷ ವಯಸ್ಸಿನ ಮಹಿಳೆಯೊಬ್ಬರ ಜೊತೆಗಿನ ಲಿವ್-ಇನ್ ಸಂಬಂಧದಲ್ಲಿ ಜನಿಸಿದ ಮಗುವನ್ನು ತನ್ನ ಸುಪರ್ದಿಗೆ ನೀಡಬೇಕು ಎಂದು ಕೋರಿ ಪುರುಷನೊಬ್ಬ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ಸಂಜಯ್ ಎಸ್. ಅಗರ್ವಾಲ್ ಅವರಿದ್ದ ಪೀಠವು ಮೇಲ್ಮನವಿಯಲ್ಲಿ ವಜಾಗೊಳಿಸಿದ್ದು, ಲಿವ್-ಇನ್ ಸಂಬಂಧಗಳು ಎರವಲು ಪಡೆದವು, ಇವು ಭಾರತೀಯ ನಂಬಿಕೆಗಳಿಗೆ ವಿರುದ್ಧವಾಗಿವೆ. ಈಗ ಮದುವೆ ಎಂಬ ಪದ್ಧತಿಯು ಜನರನ್ನು ಈ ಹಿಂದಿನಷ್ಟು ಪ್ರಮಾಣದಲ್ಲಿ ಪ್ರಭಾವಿಸುತ್ತಿಲ್ಲ ಎಂದು ಹೇಳಿದೆ.

ಏನಿದು ಪ್ರಕರಣ
ದಾಂತೇವಾಡ ಜಿಲ್ಲೆಯ ಅಬ್ದುಲ್ ಹಮೀದ್ ಸಿದ್ದಿಕಿ ಎನ್ನುವವರು ತಾವು ಬೇರೊಂದು ಧರ್ಮದ ಮಹಿಳೆಯೊಬ್ಬರ ಜೊತೆ ಲಿವ್-ಇನ್ ಸಂಬಂಧ ಹೊಂದಿದ್ದು, ಆ ಮಹಿಳೆಯು ಮಗುವಿಗೆ ಜನ್ಮ ನೀಡಿದ್ದಾಗಿ ತಿಳಿಸಿದ್ದರು. ಮಗುವನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಸಿದ್ದಿಕಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ತಿರಸ್ಕರಿಸಿದ ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಮತವನ್ನು ಬದಲಾಯಿಸದೆಯೇ ತಾನು ಆಕೆಯನ್ನು 2021ರಲ್ಲಿ ಮದುವೆ ಆಗಿದ್ದಾಗಿ ಸಿದ್ದಿಕಿ ತಿಳಿಸಿದ್ದರು. 2021ರಲ್ಲಿ ಮಗು ಜನಿಸಿತು. ಆದರೆ 2023ರಲ್ಲಿ ತಾಯಿ ಮತ್ತು ಮಗು ಕಾಣೆಯಾದರು. ಆಗ ಸಿದ್ದಿಕಿ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಆದರೆ ತಾನು ತನ್ನ ತಾಯಿಯ ಜೊತೆ ವಾಸಿಸುತ್ತಿರುವುದಾಗಿ ಆ ಮಹಿಳೆ ಹೈಕೋರ್ಟ್ಗೆ ಮಾಹಿತಿ ನೀಡಿದ್ದರು. ಸಿದ್ದಿಕಿ ಅವರಿಗೆ ಅದಾಗಲೇ ಮದುವೆ ಆಗಿ ಮೂವರು ಮಕ್ಕಳಿದ್ದರು.

ಸಿದ್ಧಿಕಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ಸಮಾಜದ ಕೆಲವು ಗುಂಪುಗಳಲ್ಲಿ ಇರುವ ಲಿವ್-ಇನ್ ಸಂಬಂಧವು ಭಾರತೀಯ ಸಂಸ್ಕೃತಿಯಲ್ಲಿ ಈಗಲೂ ಒಂದು ಕಳಂಕ ಎಂದೇ ಪರಿಗಣಿತವಾಗಿದೆ. ಪಶ್ಚಿಮ ದೇಶಗಳ ಸಾಂಸ್ಕೃತಿಕ ಪ್ರಭಾವದ ಕಾರಣದಿಂದಾಗಿ, ಮದುವೆ ಎನ್ನುವ ಆಚರಣೆಯು ಈ ಹಿಂದೆ ಜನರ ಮೇಲೆ ಹೊಂದಿದ್ದ ಪ್ರಭಾವವು ಈಗ ಉಳಿದಿಲ್ಲ. ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು ಗೋಚರಿಸುತ್ತದೆ. ಈ ಪರಿವರ್ತನೆ ಹಾಗೂ ವೈವಾಹಿಕ ಹೊಣೆಗಾರಿಕೆಗಳ ವಿಚಾರವಾಗಿ ಉದಾಸೀನ ಧೋರಣೆಯು ಲಿವ್-ಇನ್ ಸಂಬಂಧಗಳಿಗೆ ಬಹುಶಃ ಜನ್ಮನೀಡಿರಬಹುದು’ ಎಂದು ತಿಳಿಸಿದೆ.

ಆದರೆ, ಇಂತಹ ಸಂಬಂಧಗಳಲ್ಲಿ ಇರುವ ಮಹಿಳೆಯರನ್ನು ರಕ್ಷಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ, ಲಿವ್-ಇನ್ ಸಂಬಂಧಗಳ ಸಂಗಾತಿಯಿಂದ ಹಿಂಸೆಗೆ ಗುರಿಯಾಗುವವರೂ ಅವರೇ ಎಂದು ನ್ಯಾಯಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.