06/03/2026

Law Guide Kannada

Online Guide

ಮ್ಯಾಜಿಸ್ಟ್ರೇಟ್ ತಮ್ಮದೇ ಪ್ರಕರಣದಲ್ಲಿ ನ್ಯಾಯಾಧೀಶರಾಗಲು, ಆದೇಶ ನೀಡಲು ಸಾಧ್ಯವಿಲ್ಲ- ಸುಪ್ರೀಂಕೋರ್ಟ್

ನವದೆಹಲಿ: ಮ್ಯಾಜಿಸ್ಟ್ರೇಟ್ ತಮ್ಮದೇ ಸಂಬಂಧಿತ ಪ್ರಕರಣದಲ್ಲಿ ನ್ಯಾಯಾಧೀಶರಾಗಲು ಮತ್ತು ಪ್ರಕರಣದ ಬಗ್ಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್.ಕೆ. ಸಿಂಗ್ ಅವರ ಪೀಠವು , ಯಾರೂ ತಮ್ಮದೇ ಪ್ರಕರಣದಲ್ಲಿ ನ್ಯಾಯಾಧೀಶರಾಗಬಾರದು ಎಂಬ ಪ್ರಾಚೀನ ನ್ಯಾಯಸೂತ್ರವನ್ನು ಉಲ್ಲೇಖಿಸಿದ್ದು, ಈ ತತ್ವವು ನ್ಯಾಯಾಧೀಶರಿಗೂ ಅನ್ವಯವಾಗುತ್ತದೆ ಎಂದು ಹೇಳಿತು.

ನ್ಯಾಯಾಲಯದ ಮುಂದೆ ಇದ್ದ ಪ್ರಕರಣದಲ್ಲಿ, ಒಬ್ಬ ರೈಲ್ವೆ ಮ್ಯಾಜಿಸ್ಟ್ರೇಟ್ ರೈಲ್ವೆ ಆಡಳಿತ ಮತ್ತು ಅದರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ರೈಲು ನಿಲ್ದಾಣ ಪ್ರದೇಶಗಳಲ್ಲಿ ಟಿಕೆಟ್ ಪರಿಶೀಲನೆ ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಲು ಅಗತ್ಯ ಸಿಬ್ಬಂದಿಯನ್ನು ಒದಗಿಸದ ಕಾರಣ ಅವರಿಗೆ ಶೋಕಾಸ್ ನೋಟಿಸ್ (ಕಾರಣ ಕೇಳಿ ನೋಟಿಸ್) ಜಾರಿ ಮಾಡಿದ್ದರು. ಈ ಸಂಬಂಧ ಮ್ಯಾಜಿಸ್ಟ್ರೇಟ್ ಪರವಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಪೀಠವು ರದ್ದು ಪಡಿಸಿತು.

ಅಲ್ಲದೆ “ಈ ಪ್ರಕರಣದಲ್ಲಿ, ರೈಲ್ವೆ ಮ್ಯಾಜಿಸ್ಟ್ರೇಟ್ ತಮ್ಮದೇ ಪ್ರಕರಣದಲ್ಲಿ ನ್ಯಾಯಾಧೀಶರಾಗಲು ಪ್ರಯತ್ನಿಸಿದ್ದಾರೆ. ಮೇಲ್ಮನವಿದಾರ ಸಂಖ್ಯೆ 3 (ನಾರ್ದನ್ ರೈಲ್ವೇಸ್ ನ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ) ಅವರಿಗೆ ಅವರು ಕಳುಹಿಸಿದ ಸಂವಹನವನ್ನು ನ್ಯಾಯಾಂಗ ಕಾರ್ಯವಿಧಾನವೆಂದು ಪರಿಗಣಿಸಲಾಗುವುದಿಲ್ಲ. ಯಾವುದೇ ಸಂದರ್ಭದಲ್ಲೂ ಮೇಲ್ಮನವಿದಾರರು ತಮ್ಮ ಅಧಿಕೃತ ಸಾಮರ್ಥ್ಯ ಮೀರಿ ಕಾರ್ಯನಿರ್ವಹಿಸಿಲ್ಲ” ಎಂದು ಅಭಿಪ್ರಾಯಿಸಿತು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ, “ಮ್ಯಾಜಿಸ್ಟ್ರೇಟ್ ತಮ್ಮದೇ ಪ್ರಕರಣದಲ್ಲಿ ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಸ್ಪಷ್ಟ ತೀರ್ಪು ನೀಡಿತು. ಈ ಆದೇಶವು ರೈಲ್ವೆ ನ್ಯಾಯಾಧಿಕಾರಿಗೆ ಸಮರ್ಪಕ ಮಾನವಬಲ, ಸಿಬ್ಬಂದಿ ಒದಗಿಸದ ಕಾರಣ ನಾರ್ದರ್ನ್ ರೈಲ್ವೇಸ್ ವಾಣಿಜ್ಯ ವ್ಯವಸ್ಥಾಪಕರ ವಿರುದ್ಧ ಪ್ರಾರಂಭಿಸಲಾಗಿದ್ದ ಕ್ರಿಮಿನಲ್ ಕಾರ್ಯವಿಧಾನಗಳಿಂದಾಗಿ ನ್ಯಾಯಾಂಗ ಮತ್ತು ರೈಲ್ವೆ ಆಡಳಿತದ ನಡುವೆ ಉಂಟಾಗಿದ್ದ ಸಂಘರ್ಷ ಕೊನೆಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.