20/05/2025

Law Guide Kannada

Online Guide

ತಂದೆ ಅಂತ್ಯಸಂಸ್ಕಾರಕ್ಕೆ ಅನುಮತಿ ಕೋರಿ ಸುಪ್ರೀಂ ಮೆಟ್ಟಿಲೇರಿದ ವ್ಯಕ್ತಿ: ಇದು ನೋವಿನ ಸಂಗತಿ ಎಂದ ನ್ಯಾಯಪೀಠ

ನವದೆಹಲಿ: ‘ಕ್ರೈಸ್ತ ಧರ್ಮದ ವಿಧಿ ವಿಧಾನಗಳ ಪ್ರಕಾರ ತಂದೆಯ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ಕೋರಿ ಅವರ ಮಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ತಂದೆ ಅಂತ್ಯಸಂಸ್ಕಾರಕ್ಕಾಗಿ ಕೋರ್ಟ್ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಬಂದಿದೆ. ಇದು ಅತ್ಯಂತ ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದೆ ಛತ್ತೀಸ್ ಗಢದ ಸ್ಥಳೀಯ ಗ್ರಾಮದಲ್ಲಿ ತಂದೆಯ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗದ ಕ್ರಿಶ್ಚಿಯನ್ ವ್ಯಕ್ತಿಯ ಮನವಿಗೆ ಸಂಬಂಧಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ , ಈ ಬೆಳವಣಿಗೆಯಿಂದ ನಮಗೆ ನೋವಾಗಿದೆ ಎಂದು ಹೇಳಿದೆ.

ಜನವರಿ 9ರಂದು ಛತ್ತೀಸ್ ಗಢ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು. ಕ್ರಿಶ್ಚಿಯನ್ ಪಾದ್ರಿಯಾಗಿದ್ದ ತನ್ನ ತಂದೆಯನ್ನು ಚಿಂದ್ವಾರಾ ಗ್ರಾಮದ ಸ್ಮಶಾನದಲ್ಲಿ ಹೂಳಲು ಅನುಮತಿ ಕೋರಿದ್ದ ಅರ್ಜಿದಾರರ ಮನವಿಯನ್ನು ಸ್ವೀಕರಿಸಿ ರಾಜ್ಯ ಸರಕಾರ ಮತ್ತು ಹೈಕೋರ್ಟ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿರುವುದು ನೋವು ತಂದಿದೆ, ಅರ್ಜಿದಾರರು ತಮ್ಮ ತಂದೆಯ ಸಮಾಧಿ ಮಾಡಲು ಸುಪ್ರೀಂ ಕೋರ್ಟ್ ಬರಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.

‘ನನ್ನ ತಂದೆ ಪಾದ್ರಿಯಾಗಿದ್ದು, ಗ್ರಾಮದ ಸ್ಮಶಾನದಲ್ಲಿ ಕ್ರಿಶ್ಚಿಯನ್ನರಿಗೆಂದು ಗುರುತಿಸಲಾಗಿರುವ ಕಡೆ ಅಂತ್ಯಕ್ರಿಯೆ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿ ರಮೇಶ್ ಬಫೇಲ್ ಎಂಬುವವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ರಮೇಶ್ ಅವರು ಹೈಕೋರ್ಟ್ನ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ನಿರ್ದಿಷ್ಟ ಗ್ರಾಮದಲ್ಲಿ ವಾಸಿಸುವ ವ್ಯಕ್ತಿಯನ್ನು ಆ ಗ್ರಾಮದಲ್ಲಿ ಏಕೆ ಸಮಾಧಿ ಮಾಡಬಾರದು? ಜನವರಿ 7ರಿಂದ ಅವರ ಪಾರ್ಥಿವ ಶರೀರವನ್ನು ಶವಾಗಾರದಲ್ಲಿ ಇಡಲಾಗಿದೆ. ವ್ಯಕ್ತಿಯೊಬ್ಬರು ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಅನುಮತಿ ಕೋರಿ ಸುಪ್ರೀಂ ಕೋರ್ಟ್ವರೆಗೂ ಬರಬೇಕಾದ ಸ್ಥಿತಿ ಬಂದಿದೆ ಎಂದು ಹೇಳುವುದಕ್ಕೆ ಬೇಸರವಾಗುತ್ತದೆ. ಕ್ಷಮಿಸಿ’ ಎಂದು ಪೀಠ ಹೇಳಿತು.

ಅರ್ಜಿಯ ಪ್ರಕಾರ, ಅರ್ಜಿದಾರರು ಬುಡಕಟ್ಟು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ತಂದೆ ವೃದ್ಧಾಪ್ಯ ಮತ್ತು ದೀರ್ಘಕಾಲದ ಅನಾರೋಗ್ಯದ ಕಾಯಿಲೆಯಿಂದ ಜನವರಿ 7ರಂದು ನಿಧನರಾಗಿದ್ದರು. ಅವರ ಕುಟುಂಬವು ಗ್ರಾಮದ ಸ್ಮಶಾನದಲ್ಲಿ ಕ್ರಿಶ್ಚಿಯನ್ನರಿಗೆ ನಿರ್ದಿಷ್ಟಪಡಿಸಿದ ಪ್ರದೇಶದಲ್ಲಿ ಅವರ ಪಾರ್ಥಿವ ಶರೀರವನ್ನು ಹೂಳಲು ಬಯಸಿದ್ದರು. ಆದರೆ ಕೆಲವು ಗ್ರಾಮಸ್ಥರು ಇದಕ್ಕೆ ವಿರೋಧಿಸಿದ್ದು, ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ನಡೆಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು.

ಗ್ರಾಮಸ್ಥರು ಹಿಂಸಾಚಾರಕ್ಕೆ ಮುಂದಾದಾಗ ಅರ್ಜಿದಾರರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಮೃತದೇಹವನ್ನು ಗ್ರಾಮದಿಂದ ಹೊರಕ್ಕೆ ಕೊಂಡೊಯ್ಯುವಂತೆ ಅವರ ಮೇಲೆ ಒತ್ತಡ ಹೇರಿದರು. ಇದರ ಪರಿಣಾಮವಾಗಿ ಜನವರಿ 7ರಿಂದ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.