Law Guide Kannada

ಉತ್ತಮ ಸಮಾಜಕ್ಕಾಗಿ - ಲಾಗೈಡ್

‘ಅನಧಿಕೃತ ರಜೆಗೆ ಮಾತೃತ್ವ ಅಸ್ತ್ರವಲ್ಲ: ಮಹಿಳಾ ಉದ್ಯೋಗಿ ವಜಾ ಕ್ರಮ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಮಾತೃತ್ವ ರಜಾ ಅವಧಿ ಪೂರ್ಣಗೊಂಡ ಬಳಿಕ ಅನಧಿಕೃತವಾಗಿ ರಜೆ ಯನ್ನು ವಿಸ್ತರಿಸಿಕೊಂಡು, ಗೈರು ಹಾಜರಿಯನ್ನು ಸಮರ್ಥಿಸಿಕೊಳ್ಳಲು ಮಾತೃತ್ವ ರಜೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಕರ್ನಾಟಕ ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ಸಾಫ್ಟ್ವೇರ್ ತಂತ್ರಜ್ಞೆಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದ ಕ್ರಮವನ್ನು ಎತ್ತಿಹಿಡಿದಿದೆ.

ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ನ್ಯಾಯಾಲಯದಲ್ಲಿ ಸಾಫ್ಟ್ವೇರ್ ಟೆಕ್ನಿಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋನಿಕಾ (36) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ‘ತಾಯ್ತನದ ರಜೆಯನ್ನು ದೀರ್ಘ ಕಾಲದ ಅನಧಿಕೃತ ಗೈರು ಹಾಜರಿಗೆ ಅನುಕೂಲಕರ ಗುರಾಣಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ.’ಮಗುವಿನ ಜನನವನ್ನೇ ಮುಂದು ಮಾಡಿಕೊಂಡು ಸರ್ಕಾರಿ ಉದ್ಯೋಗದ ಜವಾಬ್ದಾರಿಗಳಿಂದ ಶಾಶ್ವತವಾಗಿ ದೂರ ಉಳಿಯುವುದಕ್ಕೆ ಅವಕಾಶವಿಲ್ಲ’ ಎಂದು ಹೇಳಿದೆ.

ಮಾತೃತ್ವ ರಜೆಯು ಘನತೆ, ಮಾತೃತ್ವ ಮತ್ತು ಸಾಮಾಜಿಕ ಸಮಾವಣೆ ಮೇಲಿನ ಸಾಂವಿಧಾನಿಕ ಬದ್ಧತೆ ಯಾಗಿದೆ. ಆದರೆ, ಅನಧಿಕೃತ ಗೈರುಹಾಜರಿಗೆ ಅಕ್ಷಯ ಪಾತ್ರೆ ಆಗುವಂತೆ ವಿಸ್ತರಿಸಲಾಗದು. ಅಷ್ಟೇಕೆ, ಅದರ ಕಾನೂನು ಬದ್ಧ ಗಡಿಗಳನ್ನೂ ಮೀರಿ ಚಲಿಸಲಾಗದು’ ಎಂದು ವಿವರಿಸಿದೆ.

‘ಅರ್ಜಿದಾರರು ಕಾನೂನು ಬದ್ಧವಾಗಿ ಸಿಗಬೇಕಾದ ತಾಯ್ತನದ ರಜೆಯನ್ನು ಪೂರ್ಣವಾಗಿ ಬಳಸಿಕೊಂಡ ನಂತರದಲ್ಲೂ ಬೇರೆ ರಜೆಗಳನ್ನು ಪಡೆದಿದ್ದಾರೆ. ಆ ಎಲ್ಲಾ ರಜೆಗಳ ಅವಧಿ ಮುಗಿದ ನಂತರವೂ ಯಾವುದೇ ಅಧಿಕೃತ ಅನುಮತಿ ಪಡೆಯದೆ ದೀರ್ಘಕಾಲ ಗೈರು ಹಾಜರಾಗಿದ್ದಾರೆ ಎಂಬ ಅಂಶ ಗಮನಾರ್ಹ’ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

‘ಅರ್ಜಿದಾರರಿಗೆ ಸಿಗಬೇಕಾದ ತಾಯ್ತನದ ರಜೆಯನ್ನು ಮೇಲಾಧಿಕಾರಿಗಳು ನಿರಾಕರಣೆ ಮಾಡಿಲ್ಲ. ಆದರೆ, ಆ ರಜೆಗಳು ಮುಗಿದ ನಂತರದಲ್ಲೂ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದಾರೆ ಹಾಗೂ ತಮ್ಮ ಗೈರನ್ನು ಸಮರ್ಥಿಸಿಕೊಳ್ಳಲು ತಾಯ್ತನದ ರಜೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವುದು ಪ್ರಕರಣದಲ್ಲಿ ದೃಢಪಟ್ಟಿದೆ’ ಎಂದು ತಿಳಿಸಿದೆ.

ಸರ್ಕಾರಿ ಉದ್ಯೋಗವೆಂದರೆ ಅದು ಜವಾಬ್ದಾರಿಯುತ ಸ್ಥಾನವಾಗಿದೆ. ಕರ್ತವ್ಯನಿಷ್ಠೆ ಮತ್ತು ಶಿಸ್ತನ್ನು ಅಪೇಕ್ಷಿಸುತ್ತದೆ. ಅಸಂಖ್ಯಾತ ಅರ್ಹ ಯುವ ಸಮುದಾಯ ಸರ್ಕಾರಿ ಉದ್ಯೋಗಕ್ಕಾಗಿ ಹಾತೊರೆಯುತ್ತಿದೆ. ಇಂತಹ ಸನ್ನಿವೇಶನದಲ್ಲಿ ಸಿಕ್ಕ ಅವಕಾಶದ ಬಗ್ಗೆ ಉದಾಸೀನ ಮಾಡಬಾರದು. ಮಗು ಹುಟ್ಟಿದ ಕಾರಣ ನೀಡಿ ಸರ್ಕಾರಿ ಉದ್ಯೋಗದ ಜವಾ ಬ್ದಾರಿಗಳಿಂದ ದೂರ ಉಳಿಯುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

 

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Scroll to Top