ಗ್ರಾಹಕರ ಹಣ ದುರ್ಬಳಕೆ : ಸಿಬ್ಬಂದಿ ವಜಾಗೊಳಿಸಿದ ಬ್ಯಾಂಕ್ ನ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಪ್ರಾಮಾಣಿಕತೆ, ವಿಶ್ವಾಸಾರ್ಹತೆಯಿಂದ ಕೆಲಸ ಮಾಡಬೇಕಿದ್ದ ಬ್ಯಾಂಕ್ ಸಿಬ್ಬಂದಿಯೊಬ್ಬರು ಗ್ರಾಹಕರ ಹಣವನ್ನ ದುರ್ಬಳಕೆ ಮಾಡಿಕೊಂಡು ಅದಕ್ಕೆ ನಕಲಿ ರಶೀದಿ ನೀಡಿ ಇದೀಗ ಕೆಲಸದಿಂದಲೇ ವಜಾಗೊಂಡಿದ್ದಾರೆ.
ಹೌದು, ಬ್ಯಾಂಕ್ ಗ್ರಾಹಕರೊಬ್ಬರಿಗೆ ಅವರು ನೀಡಿದ್ದ ಹಣಕ್ಕೆ ಪ್ರತಿಯಾಗಿ ಅವರಿಗೆ ನಕಲಿ ಎಫ್.ಡಿ. ರಶೀದಿ ನೀಡಿ ಹಣ ದುರ್ಬಳಕೆ ಮಾಡಿದ ಸಿಬ್ಬಂದಿಯನ್ನು ವಜಾಗೊಳಿಸಿದ್ದ ಬ್ಯಾಂಕ್ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಕೆ.ಸತೀಶ್ ಚಂದ್ರ ಶೆಟ್ಟಿ ಗಿs ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದೊಮ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಗ್ರಾಹಕರೊಬ್ಬರು ತನ್ನ ಖಾತೆಗೆ ಜಮೆ ಮಾಡಲು ನೀಡಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ತಪ್ಪನ್ನು ಬ್ಯಾಂಕ್ ಉದ್ಯೋಗಿಯು ಒಪ್ಪಿಕೊಂಡಿದ್ದಾನೆ. ಹಾಗಾಗಿ ಬ್ಯಾಂಕ್ ಆತನನ್ನು ವಜಾ ಗೊಳಿಸಿರುವುದು ಸರಿಯಾದ ಆದೇಶವಾಗಿದೆ ಎಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ತೀರ್ಪು ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ವಿಭಾಗೀಯ ನ್ಯಾಯಪೀಠ, ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪು ಸರಿಯಾಗಿ ಇದೆ ಎಂದು ತೀರ್ಪು ನೀಡಿ, ವಜಾ ಆದೇಶವನ್ನು ಎತ್ತಿ ಹಿಡಿದಿದೆ.
ಸಿಬ್ಬಂದಿಯೇ ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹತೆಗೆ ಹಾನಿ ಮಾಡುವ ಕೃತ್ಯ ಎಸಗಿರುವುದು ಗಂಭೀರ ಘಟನೆ. ಬ್ಯಾಂಕಿನ ಗ್ರಾಹಕರು ಬ್ಯಾಂಕಿನ ಸಿಬ್ಬಂದಿಯಿಂದಲೇ ವಂಚನೆಗೊಳಗಾಗುವ ಸಮಸ್ಯೆ ಜಾಗತಿಕ ಪಿಡುಗು ಎಂಬಂತೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇಂತಹ ಘಟನೆಗಳು ಬ್ಯಾಂಕಿನ ಘನತೆ, ಮತ್ತು ವಿಶ್ವಾಸಾರ್ಹತೆಯ ಮೇಲೆ ಘಾತಕವಾದ ಪೆಟ್ಟು ಕೊಡುತ್ತದೆ. ಸಿಬ್ಬಂದಿಯ ಇಂತಹ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಘಟನೆಗಳು ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂತಹ ಕೃತ್ಯಗಳಲ್ಲಿ ಉದಾರವಾದ ನಿಲುವು ಸಾಧ್ಯವೇ ಇಲ್ಲ ಎಂದು ವಿಭಾಗಿಯ ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಬ್ಯಾಂಕ್ ಸಿಬ್ಬಂದಿಗೆ ಪರಿಚಿತರಾಗಿದ್ದ ಮಹಿಳಾ ಗ್ರಾಹಕರೊಬ್ಬರಿಗೆ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ನಿಟ್ಟಿನಲ್ಲಿ ಅರ್ಜಿದಾರ ಬ್ಯಾಂಕ್ ಉದ್ಯೋಗಿ ಸಹಾಯ ಮಾಡಿದ್ದರು. ಆ ಬಳಿಕ, ಗ್ರಾಹಕರು ಸಿಬ್ಬಂದಿಯ ಕೈಗೆ ನಗದು ಹಣ ನೀಡಿ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ತಿಳಿಸಿದ್ದರು.
ಆದರೆ, ಈ ಹಣವನ್ನು ಬ್ಯಾಂಕ್ ಸಿಬ್ಬಂದಿಯು ಗ್ರಾಹಕರ ಖಾತೆಗೆ ಜಮಾ ಮಾಡದೆ ತನ್ನ ವೈಯಕ್ತಿಕ ಬಳಕೆಗೆ ಪಡೆದು ದುರ್ಬಳಕೆ ಮಾಡಿಕೊಂಡಿದ್ದರು. ಗ್ರಾಹಕರಿಗೆ ನಕಲಿ ಎಫ್.ಡಿ. ರಶೀದಿಗಳನ್ನೂ ನೀಡಿ ಬ್ಯಾಂಕ್ ಸಿಬ್ಬಂದಿ ವಂಚಿಸಿದ್ದರು.
ಕೆಲ ಸಮಯದ ಬಳಿಕ ಗ್ರಾಹಕರು ಖಾತೆಯಿಂದ ತಮ್ಮ ಹಣವನ್ನು ತೆಗೆಯಲು ಬಂದಾಗ ಈ ವಿಷಯ ಗ್ರಾಹಕರಿಗೆ ಗೊತ್ತಾಗಿದೆ. ತಕ್ಷಣವ ಬ್ಯಾಂಕಿನ ಉದ್ಯೋಗಿಯ ವಿರುದ್ದ ದೂರು ನೀಡಿದ್ದರು. ವಿಚಾರಣೆ ವೇಳೆ ಅರ್ಜಿದಾರ ಬ್ಯಾಂಕ್ ಉದ್ಯೋಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ತಾನು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹಾಗಾಗಿ, ತಾನು ಮಹಿಳಾ ಗ್ರಾಹಕರ ಖಾತೆಯಿಂದ ಹಣ ಪಡೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದರು.
ಆಗ, ಸಿಬ್ಬಂದಿಯು ಗ್ರಾಹಕರ ಖಾತೆಗೆ ಹಣ ತುಂಬದೇ ನಕಲಿ ರಸೀದಿಗಳನ್ನು ನೀಡಿರುವ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತನನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಬಾಧಿತ ಬ್ಯಾಂಕ್ ಸಿಬ್ಬಂದಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ