Law Guide Kannada

ಉತ್ತಮ ಸಮಾಜಕ್ಕಾಗಿ - ಲಾಗೈಡ್

ವಕೀಲರ ಜತೆ ದುರ್ವರ್ತನೆ ನ್ಯಾಯಾಂಗ ನಿಂದನೆಯಾಗುತ್ತೆ: PRO ವಜಾಗೊಳಿಸಿದ ತ್ವರಿತ ಕ್ರಮಕ್ಕೆ ಹೈಕೋರ್ಟ್ ಶ್ಲಾಘನೆ

ಅಲಹಾಬಾದ್: ಕರ್ತವ್ಯ ನಿರ್ವಹಿಸುವ ವಕೀಲರೊಂದಿಗೆ ದುರ್ವರ್ತನೆ ತೋರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅಲಹಾಬಾದ್ ಹೈಕೋರ್ಟ್, ವಕೀಲರೊಂದಿಗೆ ದುರ್ವರ್ತನೆ ತೋರಿದ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನ ವಜಾಗೊಳಿಸಿದ ತ್ವರಿತ ಕ್ರಮವನ್ನ ಶ್ಲಾಘಿಸಿದೆ.

ಅಲಹಾಬಾದ್ ಹೈಕೋರ್ಟ್ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಉತ್ತರ ಪ್ರದೇಶದ ಆಜಂಗಢ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕರ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಎಂಬವರು ಹೆಚ್ಚುವರಿ ಸರ್ಕಾರಿ ವಕೀಲರೊಂದಿಗೆ ನಡೆದುಕೊಂಡ ರೀತಿಗೆ ನ್ಯಾಯಪೀಠ ತೀವು ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರಿ ವಕೀಲರು ನ್ಯಾಯಾಲಯದ ಅಧಿಕಾರಿಗಳಾಗಿದ್ದು, ನ್ಯಾಯಾಂಗದ ನಿರ್ದೇಶನಗಳ ಅನುಷ್ಠಾನಕ್ಕಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ಅವರ ಕರ್ತವ್ಯದ ಭಾಗವಾಗಿದೆ. ರಾಜ್ಯದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೇ ಆಗಿದ್ದರೂ, ಇಂತಹ ಕರ್ತವ್ಯ ನಿರ್ವಹಿಸುವ ವಕೀಲರೊಂದಿಗೆ ದುರ್ವತ್ರನೆ ತೋರಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿತು.

ಹಾಗೆಯೇ ಘಟನೆ ಹಿನ್ನೆಲೆಯಲ್ಲಿ ದುರ್ವರ್ತನೆ ತೋರಿದ್ದ ಪಿಆರ್ಒ ರಾಜೇಶ್ ಕುಮಾರ್ ಸಿಂಗ್ ಅವರನ್ನು ಸಂಜೆ 5 ಗಂಟೆಯವರೆಗೆ ನ್ಯಾಯಾಲಯ ವಶದಲ್ಲಿಟ್ಟು, ಬಳಿಕ ಬಿಡುಗಡೆ ಮಾಡಲಾಯಿತು.

ರಾಜೇಶ್ ಕುಮಾರ್ ಸಿಂಗ್ ಅವರಿಗೆ ಪೊಲೀಸ್ ಇಲಾಖೆ “ಕಾರಣ ಕೇಳಿ” ನೋಟಿಸ್ ಜಾರಿ ಮಾಡಿದ್ದು, ಪಿಆರ್ಒ ಹುದ್ದೆಯಿಂದ ಅವರನ್ನು ವಜಾ ಮಾಡಲಾಗಿದೆ ಎಂದು ಇಲಾಖೆ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಎಸ್ಎಸ್ಪಿ ಕೈಗೊಂಡ ತ್ವರಿತ ಕ್ರಮವನ್ನು ನ್ಯಾಯಾಲಯ ಶ್ಲಾಘಿಸಿತು.

ವಕೀಲರ ವಿರುದ್ದ ದುರ್ವರ್ತನೆ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಕುರಿತು ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡುವ ಸುತ್ತೋಲೆ ಹೊರಡಿಸುವಂತೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನ್ಯಾಯಪೀಠವು ನಿರ್ದೇಶನ ನೀಡಿತು.

 

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Scroll to Top