ದಾಂಪತ್ಯ ಕಲಹದಲ್ಲಿ ಮೊಬೈಲ್ ರೆಕಾರ್ಡ್ ಸಾಕ್ಷಿಯಾಗಿ ಪರಿಗಣನೆ ಸಾಧ್ಯವಿಲ್ಲ -ಹೈಕೋರ್ಟ್
ಛತ್ತೀಸ್ ಗಢ: ದಾಂಪತ್ಯ ಕಲಹಗಳಲ್ಲಿ ಯಾವುದೇ ಸಂದರ್ಭದಲ್ಲೂ ಮೊಬೈಲ್ ರೆಕಾರ್ಡಿಂಗ್ ಅನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಛತ್ತೀಸ್ ಗಢ ಹೈಕೋರ್ಟ್ ಸ್ಪಷ್ಟಪಡಿಸಿದ್ದು, ಇದಕ್ಕೆ ಸ್ಪಷ್ಟ ಕಾರಣವನ್ನ ನೀಡಿದೆ.
ಪತಿ-ಪತ್ನಿಯರ ನಡುವಿನ ಮೊಬೈಲ್ ರೆಕಾರ್ಡಿಂಗ್ ಅನ್ನು ಸಾಕ್ಷಿಯಾಗಿ ಪ್ರಸ್ತುತ ಪಡಿಸಲು ಅನುಮತಿ ನೀಡಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಛತ್ತೀಸ್ ಗಢ ಹೈಕೋರ್ಟ್, ಪರಸ್ಪರ ಒಪ್ಪಿಗೆ ಇಲ್ಲದೆ ಮೊಬೈಲ್ ಕರೆಗಳನ್ನು ರೆಕಾರ್ಡ್ ಮಾಡುವುದು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಗೌಪ್ಯತೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ತಮ್ಮ ಮತ್ತು ಪತ್ನಿ ನಡುವಿನ ಸಂಭಾಷಣೆಯನ್ನು ತಮಗೆ ತಿಳಿಯದೆ ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದೆ. ಈ ಕ್ರಮವು ಸಂವಿಧಾನಿಕ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ಪ್ರಕರಣದ ಹಿನ್ನೆಲೆ
ಛತ್ತೀಸ್ ಘಡದ ಮಹಾಸಮುಂದ್ ಜಿಲ್ಲೆಯಲ್ಲಿ ಪತಿಯಿಂದ ಜೀವನಾಂಶವನ್ನು ಪಡೆಯಲು ಪತ್ನಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ವೇಳೆ ಪತಿಯು ತನ್ನ ಪತ್ನಿ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ನ್ಯಾಯಾಲಯದಲ್ಲಿ ಹಾಜರುಪಡಿಸಲು ಕೋರ್ಟ್ ಅನುಮತಿ ಕೋರಿದರು.
ಪತಿ ತನ್ನ ಪತ್ನಿಯ ಸ್ವಭಾವದ ಬಗ್ಗೆ ಆರೋಪ ಮಾಡಿದ್ದರು. ನ್ಯಾಯಾಲಯವು ಪತಿಯ ಬೇಡಿಕೆಯನ್ನು ಅಂಗೀಕರಿಸಿ ರೆಕಾರ್ಡಿಂಗ್ ಅನ್ನು ಸಾಕ್ಷಿಯಾಗಿ ತೆಗೆದುಕೊಂಡಿತು. ಕೌಟುಂಬಿಕ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಏನು ಹೇಳುತ್ತೆ ಕಾನೂನು..?
ಯಾವುದೇ ವ್ಯಕ್ತಿಯು ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಯಾವುದೇ ಎಲೆಕ್ಟ್ರಾನಿಕ್ ಸಾಧನದಿಂದ ಯಾವುದೇ ಮಾಹಿತಿ, ದಾಖಲೆ ಅಥವಾ ಇತರ ವಸ್ತುಗಳನ್ನು ಪಡೆದುಕೊಂಡರೆ ಮತ್ತು ಅವನ ಅನುಮತಿ ಅಥವಾ ಅರಿವಿಲ್ಲದೆ ಅದನ್ನು ಸಾರ್ವಜನಿಕಗೊಳಿಸಿದರೆ, ಅದನ್ನು ಐಟಿ ಕಾಯ್ದೆ-2000 ಸೆಕ್ಷನ್ 72 ರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
