06/03/2026

Law Guide Kannada

Online Guide

ಪೋಕ್ಸೋ ಪ್ರಕರಣಗಳ ಮೇಲೆ ನಿಗಾ ವಹಿಸಿ: ಅಪ್ರಾಪ್ತ ಸಂತ್ರಸ್ತರ ರಕ್ಷಣೆಗೆ SOP ಜಾರಿ ಮಾಡಿ- ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಲೈಂಗಿಕ ಅಪರಾಧಗಳಲ್ಲಿ ಅಪ್ರಾಪ್ತ ಸಂತ್ರಸ್ತರ ರಕ್ಷಣೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಪ್ರಾಮಾಣಿತ ಕಾರ್ಯಚರಣಾ ವಿಧಾನ (ಎಸ್ಒಪಿ) ಜಾರಿ ಮಾಡಿ, ಪೋಕ್ಸೋ ಪ್ರಕರಣಗಳ ಮೇಲೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ್ದ ಬಾಲಕಿಯ ಭ್ರೂಣ ತೆಗೆಯಲು ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶನ ನೀಡುವಂತೆ ಕೋರಿ ಸಂತ್ರಸ್ತೆಯ ತಾಯಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠವು ನೂತನ ಮಾರ್ಗಸೂಚಿ ರೂಪಿಸಿ ಈ ತೀರ್ಪು ನೀಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸೇರಿ ಸಂಬಂಧಪಟ್ಟ ಎಲ್ಲ ಸಂಸ್ಥೆಗಳು ಈ ಎಸ್ ಒಪಿ ರಚನೆ ಮಾಡಬೇಕು. ಆ ಮೂಲಕ ಸಂತ್ರಸ್ತರ ಎಲ್ಲ ಸಮಸ್ಯೆಗಳಿಗೆ, ಪರಿಹಾರ ದೊರಕಿಸಿಕೊಡಬೇಕು ಎಂದು ಹೇಳಿದೆ.

ಲೈಂಗಿಕ ಕಿರುಕುಳದಿಂದ ಸಂತ್ರಸ್ತರಾಗಿರುವವರ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವ ಸಂಬಂಧ ನ್ಯಾಯಪೀಠ ಸರಣಿ ನಿರ್ದೇಶನಗಳನ್ನು ನೀಡಿದೆ. ಆದರೂ, ಸರಕಾರ ನಿರ್ದೇಶನಗಳನ್ನು ನಿರ್ಲಕ್ಷಿಸಿ ಯಾವುದೇ ಆದೇಶ ಜಾರಿ ಮಾಡಿಲ್ಲ. ಹಾಗಾಗಿ, ಈ ಆದೇಶ ನೀಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿತು.

ನ್ಯಾಯಪೀಠ ನೀಡಿದ ಪ್ರಮುಖ ನಿರ್ದೇಶನಗಳು ಹೀಗಿವೆ…
ಪ್ರಕರಣ ದಾಖಲಾದ ಪ್ರತಿ ಹಂತದಲ್ಲಿ ನಿರ್ವಹಣೆಗೆ ವಿವಿಧ ಸಂಸ್ಥೆಗಳ ನಡುವಿನ ಸಂವಹನ, ದತ್ತಾಂಶದ ಹಂಚಿಕೆ ಮತ್ತು ಅಗತ್ಯ ಯೋಜನೆ ಜಾರಿ, ಮೇಲ್ವಿಚಾರಣೆ ಕಡ್ಡಾಯಗೊಳಿಸಲಾದ ಸುರಕ್ಷಿತ ಸಂಯೋಜಿತ ಡಿಜಿಟಲ್ ಪೋಕ್ಸ್ ಪೋರ್ಟಲ್ (ಡಿಪಿಪಿ) ಆರಂಭಿಸಬೇಕು. ಸಂತ್ರಸ್ತ ಹೆಸರನ್ನು ಸಂಖ್ಯೆಗಳಲ್ಲಿ ಗುರುತಿಸುವುದು (ಪಿಐಡಿ). ಪ್ರತಿಯೊಂದು ಹಂತದಲ್ಲೂ ಸಂತ್ರಸ್ತರ ಹೆಸರನ್ನು ಗುರುತಿಸುವುದರ ಬದಲಿಗೆ ಆಲ್ಫಾ ನ್ಯೂಮರಿಕ್ (ಅಕ್ಷರ-ಸಂಖ್ಯೆ) ಕೋಡ್ ಗಳನ್ನು ಬಳಸಿ ಸಂತ್ರಸ್ತೆ ಗುರುತು ಗೊತ್ತಾಗದಂತೆ ದಾಖಲೆಗಳು, ಸಂದೇಶಗಳು ಮತ್ತು ಆದೇಶಗಳಲ್ಲಿ ಉಲ್ಲೇಖಿಸಬೇಕು.

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಸ್ವಯಂಚಾಲಿತವಾಗಿ ರಕ್ಷಣೆಗೆ ಮುಂದಾಗಬೇಕು. ಬಾಲ ನ್ಯಾಯ ಕಾಯಿದೆಯಡಿಯ ಸೆಕ್ಷನ್ 2(14)ರಡಿ ಲೈಂಗಿಕ ಅಪರಾ ಧಗಳಲ್ಲಿ ಪ್ರತಿ ಸಂತ್ರಸ್ತ ಮಗು ಆರೈಕೆ ಮತ್ತು ರಕ್ಷಣೆ ಅಗತ್ಯ.

ಪೋಕ್ಸೋ ನಿಯಮಗಳ ಪ್ರಕಾರ ತನಿಖೆ ಮತ್ತು ವಿಚಾರಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಂತ್ರಸ್ತ ಮಗುವಿನ ಮಾಹಿತಿ, ಆರೈಕೆ ಮತ್ತು ಭಾವನಾತ್ಮಕ ಹಾಗೂ ಪ್ರಾಯೋಗಿಕ ಸಹಾಯ ನೀಡಲು ಮಕ್ಕಳ ಕಲ್ಯಾಣ ಸಮಿತಿ ಒಬ್ಬ ಅಧಿಕಾರಿಯನ್ನು ನಿಯೋಜಿಸುವುದು. ಪ್ರಕರಣ ದಾಖಲಾದ ಏಳು ದಿನಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಿಯೋಜಿಸಲಾದ ಮನಃಶಾಸ್ತ್ರಜ್ಞ ಅಥವಾ ಕ್ಲಿನಿಕಲ್ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಿಂದ ಘಟನೆ ಸಂಬಂಧ ಸಮಗ್ರ ಮೌಲ್ಯಮಾಪನ ನಡೆಸಬೇಕು.

ಸಂತ್ರಸ್ತೆಗೆ ಮೂರು ತಿಂಗಳವರೆಗೆ ವಾರಕ್ಕೊಮ್ಮೆ. ಬಳಿಕ ಪಾಕ್ಷಿಕ ಅಥವಾ ಅಗತ್ಯವಿರುವ ಸಂದರ್ಭದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಮಾನಸಿಕ ಚಿಕಿತ್ಸೆ ನೀಡುವುದು. ಡಿಡಿಪಿ ಡ್ಯಾಶ್ ಬೋರ್ಡ್ ಗಳು ಮತ್ತು ಕಾರ್ಯಕ್ಷಮತೆ ಸೂಚಕಗಳು ರಚನೆ ಮಾಡಬೇಕು. ದಿನದ 24 ಗಂಟೆ ಪಿಎಚ್ ಸಿಗಳಲ್ಲಿ ಸಂತ್ರಸ್ತರಿಗೆ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

ಸಂತ್ರಸ್ತೆಯು ಗರ್ಭಧಾರಣೆ ಮುಂದುವರೆಸಲು ಬಯಸಿದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಡಿಪಿಪಿಯ ಮೇಲೆ ಸಮಗ್ರ ತಾಯಿ ಮತ್ತು ಮಕ್ಕಳ ಆರೈಕೆ ಯೋಜನೆ ರೂಪಿಸಿ ಅನುಮೋದನೆ ನೀಡಬೇಕು.
ಪ್ರಸವದ ಬಳಿಕ ಆರೈಕೆ ಮತ್ತು ದತ್ತು ಮತ್ತು ಪರ್ಯಾಯ ಆರೈಕೆ (ಐಎಂಸಿಸಿಪಿ) ಕನಿಷ್ಠ ಎರಡು ವರ್ಷಗಳ ಅವಧಿಗೆ ವಿಸ್ತರಿಸಬೇಕು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.