ನಿವೃತ್ತಿ ಅಂಚಿನ ನ್ಯಾಯಾಧೀಶರಿಂದ ಹೆಚ್ಚೆಚ್ಚು ಆದೇಶ: ‘ಕೊನೆಯ ಓವರ್ ಗಳಲ್ಲಿ ಸಿಕ್ಸರ್ ಸಿಡಿಸಿದಂತೆ – ಸುಪ್ರೀಂ ಆಕ್ಷೇಪ
ನವದೆಹಲಿ: ನ್ಯಾಯಧೀಶರು ನಿವೃತ್ತಿ ಅಂಚಿಗೆ ಬಂದಾಗ ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವ ಪ್ರವೃತ್ತಿಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು ‘ಕೊನೆಯ ಓವರ್ ಗಳಲ್ಲಿ ಬ್ಯಾಟ್ಸ್ಮನ್ ಸಿಕ್ಸರ್ಗಳನ್ನು ಸಿಡಿಸುವಂತೆ ಇದು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ನಿ, ವಿಪುಲ್ ಎಂ. ಪಾಂಚೋಲಿ ಅವರನ್ನ ಒಳಗೊಂಡ ನ್ಯಾಯಪೀಠ ನ್ಯಾಯಧೀಶರು ನಿವೃತ್ತಿ ಅಂಚಿಗೆ ಬಂದಾಗ ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಸರಿಯಲ್ಲ ಎಂದಿದೆ.
ಮಧ್ಯಪ್ರದೇಶದ ಜಿಲ್ಲಾ ಪ್ರಧಾನ ನ್ಯಾಯಾಧೀಶರೊಬ್ಬರು ತಮ್ಮ ನಿವೃತ್ತಿಗೂ ಮೊದಲು ಕೆಲ ಪ್ರಶ್ನಾರ್ಹ ಆದೇಶಗಳನ್ನು ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪೂರ್ಣ ಪೀಠವು ಅವರನ್ನು ನಿವೃತ್ತಿಗೂ 10 ದಿನ ಮುನ್ನ ಅಮಾನತು ಮಾಡಿತ್ತು. ಮಧ್ಯಪ್ರದೇಶದ ಈ ನ್ಯಾಯಾಧೀಶರು ನವೆಂಬರ್ 30ರಂದು ನಿವೃತ್ತಿ ಆಗಬೇಕಿತ್ತು. ಆದರೆ ನ. 19ರಂದು ಅವರನ್ನು ಅಮಾನತುಗೊಳಿಸಲಾಗಿತ್ತು.
ಅಮಾನತು ಮಾಡಿದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಧೀಶರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ಪೀಠವು, ನಿವೃತ್ತಿ ಅಂಚಿಗೆ ಬಂದಾಗ ನ್ಯಾಯಾಧೀಶರು ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ‘ಅರ್ಜಿದಾರರು ನಿವೃತ್ತಿಗೂ ಮುನ್ನ ಸಿಕ್ಸರ್ ಗಳನ್ನು ಹೊಡೆಯಲು ಪ್ರಾರಂಭಿಸಿದರು. ಇದು ದುರದೃಷ್ಟಕರ ಪ್ರವೃತ್ತಿ. ಇದನ್ನು ಹೆಚ್ಚಿಗೆ ವಿವರಿಸಲು ಬಯಸುವುದಿಲ್ಲ’ ಎಂದಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಪಿನ್ ಸಂಘ, ‘ಅರ್ಜಿದಾರರು, ವಾರ್ಷಿಕ ಗೋಪ್ಯ ವರದಿಗಳಲ್ಲಿ ದೋಷರಹಿತ ಸೇವಾ ದಾಖಲೆಗಳನ್ನು ಹೊಂದಿದ್ದಾರೆ. ನ್ಯಾಯಾಂಗ ಆದೇಶಗಳನ್ನು ಹೊರಡಿಸಿದ್ದಕ್ಕಾಗಿ ನ್ಯಾಯಾಂಗದ ಅಧಿಕಾರಿಗಳನ್ನು ಶಿಸ್ತುಕ್ರಮಕ್ಕೆ ಒಳಪಡಿಸಲು ಆಗುವುದಿಲ್ಲ’ ಎಂದು ವಾದಿಸಿದರು. ಅಮಾನತಿನ ಕಾನೂನು ಬದ್ಧತೆಯನ್ನು ಪ್ರಶ್ನಿಸಿದರು.
ನ್ಯಾಯಾಧೀಶರು ಹೊರಡಿಸಿದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು, ಈ ಆದೇಶಗಳನ್ನು ಉನ್ನತ ನ್ಯಾಯಾಲಯಗಳು ಸರಿಪಡಿಸಬಹುದು ಎಂದೂ ಅವರು ಹೇಳಿದರು.
ತಪ್ಪಾದ ಆದೇಶಗಳಿಗೆ ನ್ಯಾಯಾಂಗದ ಅಧಿಕಾರಿ ವಿರುದ್ಧ ಸಾಮಾನ್ಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಪೀಠ ತಾತ್ವಿಕವಾಗಿ ಒಪ್ಪಿಕೊಂಡಿತು. ‘ಇದಕ್ಕಾಗಿ ಅಮಾನತುಗೊಳಿಸುವುದಿಲ್ಲ, ಆದರೆ ಆದೇಶಗಳು ಸ್ಪಷ್ಟವಾಗಿ ಅಪ್ರಾಮಾಣಿಕವಾಗಿದ್ದರೆ ಏನು ಮಾಡುವುದು?’ ಎಂದು ಸಿಜೆಐ ಪ್ರಶ್ನಿಸಿದರು. ನ್ಯಾಯಾಂಗದ ದೋಷ ಮತ್ತು ದುಷ್ಕೃತ್ಯದ ನಡುವೆ ವ್ಯತ್ಯಾಸವಿದೆಯಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು. ಈ ಕುರಿತ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದ ಪೀಠವು, ‘ಅಮಾನತು ಆದೇಶವನ್ನು ಹಿಂಪಡೆಯಲು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅದನ್ನು ನಾಲ್ಕು ವಾರಗಳಲ್ಲಿ ನಿರ್ಧರಿಸಬೇಕು ಎಂದು ಪೀಠವು ಹೈಕೋರ್ಟ್ ಗೆ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
