19/05/2025

Law Guide Kannada

Online Guide

ಅತ್ಯಾಚಾರ ಕೇಸ್ ದಾಖಲಿಸಲು ಬಂದ ತಾಯಿ, ಮಗಳ ಮೇಲೆ ದರ್ಪ: ಎಸ್ ಐಗೆ ದಂಡ: ಶಿಸ್ತು ಕ್ರಮಕ್ಕೆ ಸೂಚನೆ

ಬೆಂಗಳೂರು: ಯಾವುದೇ ವ್ಯಕ್ತಿ ಅನ್ಯಾಯಕ್ಕೊಳಗಾದರೇ ಮೊದಲು ಹೋಗುವುದು ಪೊಲೀಸ್ ಠಾಣೆಗಳಿಗೆ. ಆದರೆ ನ್ಯಾಯ ಕೊಡಿಸುವ ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಸರಿಯಾಗಿ ಪ್ರತಿಕ್ರಿಯೆ ನೀಡದೇ ದರ್ಪ ತೋರಿದರೇ ನೊಂದ ಜೀವಗಳಿಗೆ ಹೇಗಾಗಬೇಡ. ಅಂತೆಯೇ ಇಲ್ಲೊಬ್ಬ ಮಹಿಳೆ ತನ್ನ ಮಗಳ ಜೊತೆ ಅತ್ಯಾಚಾರ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಬಂದ ವೇಳೆ ಸಬ್ ಇನ್ಸ್ಪೆಕ್ಟರ್ ವೊಬ್ಬರು ತಾಯಿ ಮಗಳ ಮೇಲೆ ದರ್ಪ ತೋರಿದ ಘಟನೆ ನಡೆದಿದೆ.

ಅತ್ಯಾಚಾರ ಸಂಬಂಧ ದೂರು ನೀಡಲು ಬಂದ ಸಂತ್ರಸ್ತ ತಾಯಿ-ಮಗಳ ಮೇಲೆಯೇ ತುಮಕೂರು ಜಿಲ್ಲೆ ಚೇಳೂರು ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಹರೀಶ್ ದರ್ಪ ತೋರಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಎಸ್ ಐ ಹರೀಶ್ ಅವರಿಗೆ 50 ಸಾವಿರ ರೂ. ದಂಡ ವಿಧಿಸಿದಲ್ಲದೆ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಶಿಫಾರಸು ಮಾಡಿದೆ.

ಹೌದು ಅತ್ಯಾಚಾರ ಸಂಬಂಧ ಸಂತ್ರಸ್ತ ತಾಯಿ-ಮಗಳಿಂದ ದೂರು ಸ್ವೀಕರಿಸದೆ ಠಾಣೆಯಲ್ಲಿ ನಿಂದಿಸಿ ದರ್ಪ ತೋರಿಸಿದ ಆರೋಪದ ಮೇರೆಗೆ ಚೇಳೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಹರೀಶ್ ಅವರಿಗೆ Rs 50 ಸಾವಿರ ದಂಡ ಬಿದ್ದಿದೆ.

ಚೇಳೂರು ಠಾಣಾ ವ್ಯಾಪ್ತಿಯಲ್ಲಿ ತಮ್ಮ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ಕೊಡಲು ತೆರಳಿದ ತಾಯಿ ಹಾಗೂ ಮಗಳ ಮೇಲೆ ಪಿಎಸ್ ಐಹರೀಶ್, ನಿವೃತ್ತ ಪಿಎಸ್ ಐ ಪಾಪಣ್ಣ ಅವರು ದರ್ಪದಿಂದ ನಡೆದುಕೊಂಡಿದ್ದಾರೆ. ಠಾಣೆಗೆ ದೂರು ಕೊಡಲು ಬಂದರೆ ಒದ್ದು ಬಿಡುತ್ತೇನೆ ಎಂದು ಹರೀಶ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ನೊಂದ ತಾಯಿಯ ದೂರಿನನ್ವಯ ಠಾಣೆಯ ಸಿಸಿ ಟಿವಿಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಂತ್ರಸ್ತರ ಮೇಲೆ ಪಿಎಸ್ ಐ ಹರೀಶ್ ದರ್ಪ ತೋರಿಸಿರುವುದು ಕಂಡು ಬಂದಿದೆ. ಈ ಮಾಹಿತಿ ಮೇರೆಗೆ ಆರೋಪಿತ ಪಿಎಸ್ ಐ ಹರೀಶ್ ಹಾಗೂ ಈ ಹಿಂದೆ ಚೇಳೂರು ಠಾಣೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಪಾಪಣ್ಣ ಅವರಿಗೆ 50 ಸಾವಿರ ರೂ ದಂಡ ವಿಧಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.

ಅಲ್ಲದೆ ಈ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತರಿಗೆ ಆರೋಪಿಗಳಿಂದ ವಸೂಲಿ ಮಾಡಿದ ಹಣವನ್ನು ಪರಿಹಾರ ರೂಪದಲ್ಲಿ ನೀಡುವಂತೆ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.

ತಮ್ಮ ಅತ್ತೆ ನಾರಾಯಣಮ್ಮ, ಮಾವ ಪರಮಾತ್ಮ ಹಾಗೂ ಮೈದುನ ಮಧು ಅವರ ಮಾತು ಕೇಳಿ ಪಿಎಸ್ಐ ದೂರು ಸ್ವೀಕರಿಸಲು ವಿಳಂಬ ಮಾಡಿದರು. ಈ ಘಟನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಆದರೆ ಠಾಣೆಗೆ ಹೋದರೆ ಮನಬಂದಂತೆ ನಿಂದಿಸಿ ಅವಮಾನಿಸಿ ಪಿಎಸ್ ಐ ಕಳುಹಿಸಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.