ಮೋಟಾರು ಅಪಘಾತ, ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ: ಫಲಾನುಭವಿಗಳ ಪತ್ತೆಗೆ ಅಭಿಯಾನ ನಡೆಸಿ- ಸುಪ್ರೀಂ ಆದೇಶ

ನವದೆಹಲಿ: ಮೋಟಾರು ಅಪಘಾತ ಪ್ರಕರಣಗಳು ಮತ್ತು ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ ದೊರೆಯದೆ ಇರುವ ಫಲಾನುಭವಿಗಳ ಪತ್ತೆಗೆ ದೇಶವ್ಯಾಪಿ ಬೃಹತ್ ಅಭಿಯಾನ ನಡೆಸುವಂತೆ ಅಂತಹ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಮಂಡಳಿಗಳಿಗೆ ನಿರ್ದೇಶನ ನೀಡಬೇಕು ಎಂದು ದೇಶದ ಎಲ್ಲಾ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಗುಜರಾತ್ನ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರು ವಿವಿಧ ನ್ಯಾಯಮಂಡಳಿಗಳಲ್ಲಿ ಅಪಾರ ಪ್ರಮಾಣದ ಪರಿಹಾರ ಹಣವು ಸಂಬಂಧಪಟ್ಟ ಕ್ಲೇಮುದಾರರು, ಫಲಾನುಭವಿಗಳು ಹಕ್ಕುಸಾಧನೆಯನ್ನು ಮಾಡದ ಕಾರಣಕ್ಕೆ ಹಾಗೆಯೇ ಉಳಿದಿದೆ ಎಂದು ಕಳವಳ ವ್ಯಕ್ತಪಡಿಸಿದ ನಂತರ ದಾಖಲಿಸಿಕೊಳ್ಳಲಾದ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ. ಅಲ್ಲದೆ ತನ್ನ ನಿರ್ದೇಶನ ಜಾರಿಗೆ ತರುವ ಯತ್ನಗಳು ಆದಷ್ಟು ಬೇಗ ಪ್ರಾರಂಭವಾಗಬೇಕು ಎಂದಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಜುಲೈ 30ರೊಳಗೆ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದೆ.
ದೇಶದ ಎಲ್ಲ ಹೈಕೋರ್ಟ್ಗಳ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ವಿಚಾರಣಾ ನ್ಯಾಯಾಲಯಗಳಿಗೆ ತಲುಪಿಸಿ ಪರಿಹಾರ ದೊರಕಿಸುವ ಅಭಿಯಾನ ದೇಶಾದ್ಯಂತ ನಡೆಸುವಂತೆ ನಿರ್ದೇಶನ ನೀಡಿದೆ.
ಪರಿಹಾರದ ಮೊತ್ತ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲು ಎಲ್ಲ ಮೋಟಾರ್ ವಾಹನ ಅಪಘಾತ ನ್ಯಾಯಮಂಡಳಿ ಮತ್ತು ಕಾರ್ಮಿಕ ಆಯುಕ್ತರಿಗೆ ವಿವರವಾದ ನಿರ್ದೇಶನ ನೀಡಿದ್ದು, ಜುಲೈ 30ರೊಳಗೆ ಸದಿ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸೂಚನೆ ನೀಡಿದೆ.
ಪರಿಹಾರಕ್ಕೆ ಅರ್ಹರಾಗಿರುವ ಕ್ಲೈಮುದಾರರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಪೊಲೀಸರು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಂದಾಯ ಅಧಿಕಾರಿಗಳ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಹಾಯ ಮಾಡಬೇಕು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಈ ನಿರ್ದೇಶನದ ಪಾಲನೆಯ ಮೇಲ್ವಿಚಾರಣೆ ಮತ್ತು ಜವಾಬ್ದಾರಿಯನ್ನು ಹೊರಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಇದೇ ವೇಳೆ, ಈ ನಿರ್ದೇಶನಗಳು ಪಾಲನೆಯಾಗಿವೆಯೇ ಎಂಬುದನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ