07/03/2026

Law Guide Kannada

Online Guide

ನೈಸ್ ಯೋಜನೆ: 300 ಎಕರೆಗೂ ಹೆಚ್ಚಿನ ಭೂ ಸ್ವಾಧೀನ ಪ್ರಕ್ರಿಯೆ ರದ್ದು

ಬೆಂಗಳೂರು: ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ ಉದ್ದದ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕಾಗಿ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್ಗೆ (ನೈಸ್) ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶಪಡಿಸಿಕೊಂಡಿದ್ದ ಸುಮಾರು 300 ಎಕರೆಗೂ ಹೆಚ್ಚು ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.

ಅಧಿಸೂಚನೆ ಪ್ರಶ್ನಿಸಿ ಪಿ.ಶ್ರೀಧರಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಜನರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಕುರಿತಂತೆ ಆದೇಶ ಹೊರಡಿಸಿದ್ದು, ‘ಜಮೀನು ವಶಪಡಿಸಿಕೊಂಡು 23 ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೂ ಅರ್ಜಿದಾರರಿಗೆ ಪರಿಹಾರ ವಿತರಣೆ ಮಾಡಿಲ್ಲ’ ಎಂಬ ಆಕ್ಷೇಪವನ್ನು ನ್ಯಾಯಪೀಠ ಪರಿಗಣಿಸಿತು.

ಇದೇ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠ ಮತ್ತು ಸುಪ್ರೀಂ ಕೋರ್ಟ್ ಪೂರ್ವ ನಿದರ್ಶನ ತೀರ್ಪುಗಳ ಆಧಾರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಉದ್ದೇಶಿತ ಯೋಜನೆಗೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸಿ 23 ವರ್ಷಗಳಾದರೂ ಅಂತಿಮ ಆದೇಶ ಹೊರಡಿಸಿಲ್ಲ. ನಿಗದಿತ ಉದ್ದೇಶಕ್ಕೆ ಭೂಮಿಯನ್ನು ಬಳಕೆ ಕೂಡ ಮಾಡಿಲ್ಲ. ಇದರಿಂದ ಕೃಷಿ ಕೆಲಸ ಮಾಡುವ ಭೂ ಮಾಲೀಕರ ಉಪಜೀವನಕ್ಕೆ ತೊಂದರೆಯಾಗಿದೆ. ಬೇರೆ ಪ್ರಕರಣಗಳಲ್ಲಿ ರಾಜ್ಯ ಹೈಕೋರ್ಟ್ನ ವಿಭಾಗೀಯ ಪೀಠ ಮತ್ತು ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಆಧಾರವಾಗಿಟ್ಟುಕೊಂಡು ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಬೆಂಗಳೂರು-ಮೈಸೂರು ಇನ್ಸಾಸ್ಟ್ರಕ್ಟರ್ ಕಾರಿಡಾರ್ ಪ್ರಾಜೆಕ್ಟ್ (ಬಿಎಂಐಸಿಪಿ), ಎಕ್ಸ್ಪ್ರೆಸ್ ವೇ, ಟೋಲ್ ಪ್ಲಾಜಾ ಅಥವಾ ಪೆರಿಫೆರಲ್ ರಸ್ತೆ ಬಳಕೆಯ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಭೂ ಸ್ವಾಧೀನ ಅಧಿಕಾರಿ 1998ರಿಂದ 2009ರ ನಡುವೆ ಅರ್ಜಿದಾರ ಭೂ ಮಾಲೀಕರಿಂದ 300 ಎಕರೆಗೂ ಹೆಚ್ಚು ಜಮೀನು ವಶಪಡಿಸಿಕೊಳ್ಳಲು ವಿವಿಧ ದಿನಾಂಕಗಳಲ್ಲಿ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿದ್ದರು.

ಇಂಟರ್ಚೇಂಜ್, ಟೋಲ್ ಪ್ಲಾಜಾ, ಫೆರಿಫೇರಲ್ ರೋಡ್, ಲಿಂಕ್ ರೋಡ್ ಸೇರಿದಂತೆ 111 ಕಿ.ಮೀ ಉದ್ದದ ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಲು ಸುಮಾರು 6,800 ಎಕರೆಗೂ ಹೆಚ್ಚು ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಜಮೀನುಗಳನ್ನು ನೋಟಿಫೈ ಮಾಡಿತ್ತು. ಅದರಲ್ಲಿ 300 ಎಕರೆ ಜಮೀನಿಗೆ ಸಂಬಂಧಿಸಿದಂತೆ ಭೂ ಮಾಲೀಕರು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಚ್.ಎನ್.ಶಶಿಧರ ಅವರ ನೇತೃತ್ವದಲ್ಲಿ ವಕೀಲರ ತಂಡ ವಾದ ಮಂಡಿಸಿತ್ತು. ಹೈಕೋರ್ಟ್ ವಕೀಲ ಎಚ್.ಎಸ್.ಸುಹಾಸ್ ಮತ್ತು ಇತರರು ವಕಾಲತ್ತು ವಹಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.