ವಿವಾಹ ‘ಶೂನ್ಯ’ವಾದರೂ ಸಂಗಾತಿಯಿಂದ ಜೀವನಾಂಶ ಪಡೆದುಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ – ಸುಪ್ರೀಂ ಕೋರ್ಟ್

ನವದೆಹಲಿ: ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ವಿವಾಹವು ಶೂನ್ಯ (Void) ಎಂದು ಘೋಷಣೆಯಾಗಿದ್ದರೂ ಆ ಪ್ರಕರಣದಲ್ಲಿ ಸಂಗಾತಿಯಿಂದ ಜೀವನಾಂಶ ಅಥವಾ ಶಾಶ್ವತ ಮೊತ್ತವನ್ನು ಪಡೆಯಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸೆಕ್ಷನ್ 11ರ ಅಡಿಯಲ್ಲಿ ಶೂನ್ಯ ವಿವಾಹ ಎಂದು ಘೋಷಣೆಯಾಗಿದ್ದರೂ, ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 25ರ ಅಡಿಯಲ್ಲಿ ಪಕ್ಷಕಾರರು ತನ್ನ ಸಂಗಾತಿಯಿಂದ ಜೀವನಾಂಶ ಪಡೆದುಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಭಯ ಶ್ರೀನಿವಾಸ ಓಕಾ, ಅಪ್ಪನುದ್ದೀನ್ ಅಮಾನುಲ್ಲ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಸಿಆರ್ಪಿಸಿಯ ಸೆಕ್ಷನ್ 125 ಮತ್ತು ವಿವಾಹ ಕಾಯ್ದೆಯ ಸೆಕ್ಷನ್ 25 ಸಂಪೂರ್ಣವಾಗಿ ಭಿನ್ನವಾದ ಸೆಕ್ಷನ್ಗಳಾಗಿವೆ. ಸಿಆರ್ಪಿಸಿಯ ಸೆಕ್ಷನ್ 125 ಯಲ್ಲಿ ಅನ್ವಯವಾಗುವ ಸಂಗತಿಯು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 25ಕ್ಕೆ ಅನ್ವಯವಾಗುವುದಿಲ್ಲ. ಸಿಆರ್ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಪತ್ನಿ ಮತ್ತು ಮಕ್ಕಳಿಗೆ ಪತಿಯಿಂದ ಜೀವನಾಂಶ ಕೇಳುವ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೆ, ಪತಿಗೆ ಈ ಸೆಕ್ಷನ್ ಅನ್ವಯವಾಗದು ಎಂದು ನ್ಯಾಯಪೀಠ ಹೇಳಿದೆ.
ಆದರೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಪತಿ ಅಥವಾ ಪತ್ನಿ ತನ್ನ ಸಂಗಾತಿಯಿಂದ ಜೀವನಾಂಶ ಶಾಶ್ವತ ಮೊತ್ತದ ಪರಿಹಾರವನ್ನು ಯಾಚಿಸಬಹುದಾಗಿದೆ ಎಂದು ನ್ಯಾಯಪೀಠ ವಿವರಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ