07/03/2026

Law Guide Kannada

Online Guide

ವಾಟ್ಸಾಪ್ ಮೂಲಕ ನೋಟಿಸ್ ಬೇಡ: ಕ್ರಮ ಕಾನೂನು ಪ್ರಕಾರ ನಡೆಯಲಿ – ಸುಪ್ರೀಂ ಕೋರ್ಟ್

ನವದೆಹಲಿ: ವಾಟ್ಸಾಪ್ ಅಥವಾ ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನೋಟಿಸ್ ನೀಡಬಾರದು. ನೋಟಿಸ್ ನೀಡುವ ಪ್ರಕ್ರಿಯೆ ಕಾನೂನಿನ ಪ್ರಕಾರ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, “ವಾಟ್ಸಾಪ್ ಅಥವಾ ಟ್ವಿಟರ್ ನಲ್ಲಿ ನೋಟಿಸ್ ನೀಡಬೇಡಿ. ಕಾನೂನಿನ ಪ್ರಕಾರ ಸರಿಯಾದ ರೀತಿಯಲ್ಲಿ ಸಲ್ಲಿಸಿ” ಎಂದು ಸೂಚಿಸಿತು.

ಅತ್ಯಾಚಾರ ಆರೋಪ ಸೇರಿದಂತೆ ಬಿಎನ್ಎಸ್ ನ ಸೆಕ್ಷನ್ 64(2)(ಜಿ), 351(2), 296 ಹಾಗೂ 3(5) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಅರ್ಜಿದಾರರ ಪರವಾಗಿ ವಕೀಲರು ಹಾಜರಾಗಿದ್ದರು. “ದೂರುದಾರರಿಗೆ ನೋಟಿಸ್ ನೀಡಿದ್ದೀರಾ?” ಎಂದು ನ್ಯಾಯಪೀಠ ಪ್ರಶ್ನಿಸಿದಾಗ, ವಕೀಲರು “ದೂರುದಾರರು ಸಂಪರ್ಕದಲ್ಲಿಲ್ಲ; ಆದ್ದರಿಂದ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಿದ್ದೇವೆ” ಎಂದು ತಿಳಿಸಿದರು.

ಇದಕ್ಕೆ ತಕ್ಷಣ ನ್ಯಾಯಮೂರ್ತಿ ಕುಮಾರ್ ಪ್ರತಿಕ್ರಿಯಿಸಿ, “ಇಲ್ಲ, ಇಲ್ಲ… ವಾಟ್ಸಾಪ್ ಅಥವಾ ಟ್ವಿಟರ್ ಮೂಲಕ ನೋಟಿಸ್ ನೀಡಬಾರದು. ಹೋಗಿ ಕಾನೂನಿನ ಪ್ರಕಾರ ನೋಟೀಸ್ ನೀಡಿ ಎಂದು ಸೂಚನೆ ನೀಡಿದರು.

ವಕೀಲರು “ದೂರುದಾರರು ವಾಟ್ಸಾಪ್ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ‘ಸುಪ್ರೀಂ ಕೋರ್ಟ್ ನಿರ್ದೇಶನ ಬಂದರೆ ಮಾತ್ರ ಸ್ವೀಕರಿಸುತ್ತೇವೆ’ ಎಂದು ಮಾಹಿತಿ ಅಧಿಕಾರಿಯೂ ಹೇಳಿದ್ದಾರೆ ಎಂದರೂ ಸಹ ನ್ಯಾಯಪೀಠವು ತನ್ನ ನಿಲುವಿನಲ್ಲಿ ಬದಲಾವಣೆ ತೋರಿಸಲಿಲ್ಲ. ನಂತರ ಪೀಠವು ಸಂಬಂಧಪಟ್ಟ ಪೊಲೀಸರಿಗೆ ಎರಡು ವಾರಗಳೊಳಗೆ ಸಂತ್ರಸ್ತೆಗೆ ನೋಟಿಸ್ ನೀಡುವಂತೆ ನಿರ್ದೇಶಿಸಿತು. ಜೊತೆಗೆ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶ ಮುಂದುವರಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.