ಸೂಕ್ತ ಪರಿಹಾರ ನೀಡದೇ ಯಾವುದೇ ವ್ಯಕ್ತಿಯ ಆಸ್ತಿ ವಶಪಡಿಸಿಕೊಳ್ಳುವಂತಿಲ್ಲ-ಸುಪ್ರೀಂಕೋರ್ಟ್

ನವದೆಹಲಿ: ಅಭಿವೃದ್ಧಿ ಕಾಮಗಾರಿಗಳಿಗೆ ವಶಪಡಿಸಿಕೊಂಡ ಭೂಮಿಗೆ ಕಳೆದ 22 ವರ್ಷಗಳಿಂದ ಸೂಕ್ತ ಪರಿಹಾರ ನೀಡದೆ ಭೂಮಾಲೀಕರನ್ನ ಅಲೆದಾಡುವಂತೆ ಮಾಡಿದ ಅಧಿಕಾರಿಗಳ ನಡೆ ಉಡಾಫೆಯ ಮನೋಭಾವಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಸೂಕ್ತ ಪರಿಹಾರ ನೀಡದೇ ಯಾವುದೇ ವ್ಯಕ್ತಿಯ ಆಸ್ತಿ ವಶಪಡಿಸಿಕೊಳ್ಳುವಂತಿಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಬೆಂಗಳೂರು-ಮೈಸೂರು ನೈಸ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ವಶಪಡಿಸಿಕೊಂಡ ಭೂಮಿಗೆ ಕಳೆದ 22 ವರ್ಷಗಳಿಂದ ಸೂಕ್ತ ಪರಿಹಾರ ನೀಡಿಲ್ಲ. ಈ ಬಗ್ಗೆ ನೈಸ್ ಕಾರಿಡಾರ್ ಸಂತ್ರಸ್ತರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಬಿ ಆರ್ ಗವಾಯಿ ಹಾಗೂ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸೂಕ್ತ ಪರಿಹಾರ ನೀಡದೆ ಯಾವುದೇ ವ್ಯಕ್ತಿಗೆ ಸೇರಿದ ಆಸ್ತಿಯನ್ನು ಸರಕಾರ ಭೂ ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಖಾಸಗಿ ಆಸ್ತಿಗೆ ಸೂಕ್ತ ಪರಿಹಾರ ನೀಡಿದ ಬಳಿಕವೇ ಅಭಿವೃದ್ಧಿ ಯೋಜನೆಗಳಿಗೆ ವಶಪಡಿಸಿಕೊಳ್ಳಬಹುದು. ಆಸ್ತಿಯ ಹಕ್ಕು ಮೂಲಭೂತ ಹಕ್ಕು ಅಲ್ಲ. ಆದರೂ ಸಂವಿಧಾನದ ವಿಧಿ 300 ಎ ಅಡಿಯಲ್ಲಿ ಆಸ್ತಿ ಹೊಂದುವ ಅವಕಾಶ ಇದೆ. ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ತನ್ನ ಆಸ್ತಿಯಿಂದ ವಂಚಿತರಾಗುವಂತಿಲ್ಲ. ಇದು ಸಂವಿಧಾನಿಕ ಹಕ್ಕಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ, ಒಬ್ಬ ವ್ಯಕ್ತಿಗೆ ಸೂಕ್ತ ಪರಿಹಾರವನ್ನು ನೀಡದೆ, ಆತನ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು 57 ಪುಟಗಳ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ವಿವರಿಸಿದೆ. ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪ್ರಕ್ರಿಯೆ ನಡೆಸಿದ ಎರಡು ತಿಂಗಳ ಒಳಗೆ ಪರಿಹಾರ ನೀಡಬೇಕು. 2019ರ ಏಪ್ರಿಲ್ 22ಕ್ಕೆ ಅನ್ವಯವಾಗುವಂತೆ ವಿವಾದಿತ ಭೂಮಿಯ ಮಾರುಕಟ್ಟೆ ಮೌಲ್ಯ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಪರಿಹಾರ ಅರ್ಜಿದಾರರಿಗೆ ಪರಿಹಾರ ನೀಡದೆ ಇರಲು ಯಾವುದೇ ಸಕಾರಣಗಳಿಲ್ಲ. ಆದರೆ, ಸರಕಾರ ಮತ್ತು ಅಧಿಕಾರಿಗಳ ನಿರಾಸಕ್ತಿಯಿಂದ ಭೂಮಿ ಕಳೆದುಕೊಂಡವರ ಬದುಕು ಸಂಕಟಮಯವಾಗಿದೆ. ಈ ಯಾತನೆ ಅನುಭವಿಸಲು ಅಧಿಕಾರಿಗಳು ಮತ್ತು ಸರಕಾರವೇ ನೇರ ಹೊಣೆ ಎಂದು ಸುಪ್ರೀಂಕೋರ್ಟ್ ಕಟು ಟೀಕೆ ವ್ಯಕ್ತಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ