ಸಾಕ್ಷಿಗಳ ಮುಖ್ಯ ವಿಚಾರಣೆ ಪೂರ್ಣಗೊಳ್ಳುವವರೆಗೂ ಪಾಟಿ ಸವಾಲಿನ ತರಾತುರಿ ಸಲ್ಲದು- ಹೈಕೋರ್ಟ್
ಬೆಂಗಳೂರು: ಕೊಲೆ ಯತ್ನ ಪ್ರಕರಣ ಸಂಬಂಧ ‘ದೋಷಾರೋಪ ಪಟ್ಟಿಯಲ್ಲಿರುವ ಎಂಟೂ ಸಾಕ್ಷಿಗಳ ಮುಖ್ಯ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ದಾಖಲಾಗುವ ತನಕ ಪಾಟಿ ಸವಾಲನ್ನು ನಿರ್ಬಂಧಿಸಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ಬಿಹಾರದ ಸಮಷ್ಟಿಪುರ ಜಿಲ್ಲೆಯ ಮಂಗಳಾಪುರದ ರವೀಂದ್ರ ಕುಮಾರ್ ಮತ್ತು ಮನೋಜ್ ಕುಮಾರ್ ಸಹಾನಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮನ್ನಿಸಿತು. ಎಂಟು ಜನ ಪ್ರತ್ಯಕ್ಷ ಸಾಕ್ಷಿಗಳಿರುವ ಕೊಲೆ ಯತ್ನದ ಪ್ರಕರಣದಲ್ಲಿ, ‘ಪ್ರಾಸಿಕ್ಯೂಟರ್, ಅಷ್ಟೂ ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ದಾಖಲು ಮಾಡಿಸಿದ ನಂತರವೇ ಎಲ್ಲರ ಪಾಟಿ ಸವಾಲಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆರೋಪಿಗಳು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠವು, ‘ದೋಷಾರೋಪ ಪಟ್ಟಿಯಲ್ಲಿರುವ ಎಂಟೂ ಸಾಕ್ಷಿಗಳ ಮುಖ್ಯ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ದಾಖಲಾಗುವತನಕ ಪಾಟಿ ಸವಾಲನ್ನು ನಿರ್ಬಂಧಿಸಬೇಕು ಮತ್ತು ಪಾಟಿ ಸವಾಲಿಗೆ ಒತ್ತಾಯ ಮಾಡಬಾರದು’ ಎಂದು ಸೆಷನ್ಸ್ ಕೋರ್ಟ್ಗೆ ನಿರ್ದೇಶಿಸಿತು.
ತನಿಖೆ ವೇಳೆ ದೋಷಾರೋಪ ಪಟ್ಟಿಯಲ್ಲಿರುವ 1ರಿಂದ 8ರವರೆಗಿನ ಎಲ್ಲಾ ಸಾಕ್ಷಿಗಳು ಕಲಂ 161ರ ಅಡಿಯಲ್ಲಿ ಒಂದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಅಂಶದ ಹಿನ್ನೆಲೆಯಲ್ಲಿ, ಸೆಷನ್ಸ್ ನ್ಯಾಯಾಲಯ ಕಾನೂನಿಗೆ ಅನುಸಾರವಾಗಿ ತನ್ನ ವಿವೇಚನಾ ಅಧಿಕಾರ ಚಲಾಯಿಸುವಲ್ಲಿ ವಿಫಲವಾಗಿದೆ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.
‘ಹಾಲಿ ಪ್ರಕರಣದಲ್ಲಿ, ಒಂದೇ ಘಟನೆಗೆ ಹಲವಾರು ಸಾಕ್ಷಿಗಳನ್ನು ಪ್ರತ್ಯಕ್ಷದರ್ಶಿಗಳು ಎಂದು ಉಲ್ಲೇಖಿಸಲಾಗಿದೆ ಮತ್ತು ಇವರೆಲ್ಲಾ ನಿಕಟ ಸಂಬಂಧಿಗಳಾಗಿದ್ದಾರೆ ಎಂಬುದು ಗಮನಾರ್ಹ. ಹೀಗಾಗಿ, ಇವರಲ್ಲಿ ಆರಂಭಿಕ ಸಾಕ್ಷಿಯ ಮುಖ್ಯ ವಿಚಾರಣೆ ಮುಗಿದ ಕೂಡಲೇ ಆತನ ಪಾಟಿ ಸವಾಲಿಗೆ ಅವಕಾಶ ಮಾಡಿಕೊಟ್ಟಲ್ಲಿ ಅದರಿಂದ ಹೊರಹೊಮ್ಮುವ ಪ್ರಾಸಿಕ್ಯೂಷನ್ ದೌರ್ಬಲ್ಯ ನ್ಯಾಯದ ಸತ್ವವನ್ನು ಉಡುಗಿಸುತ್ತದೆ ಎಂಬ ಅರ್ಜಿದಾರರ ಆತಂಕ ಯಥೋಚಿತವಾಗಿದೆ. ಮಾತ್ರವಲ್ಲ, ನ್ಯಾಯಯುತವಾಗಿಯೂ ಗುರುತಿಸಲಾದ ಅಂಶಗಳನ್ನು ಒಳಗೊಂಡಿದೆ. ಸೆಷನ್ಸ್ ಕೋರ್ಟ್, ಸಿಆರ್ಪಿಸಿ ಕಲಂ 231(2)ರ ಅಡಿಯಲ್ಲಿ ಅರ್ಜಿ ತಿರಸ್ಕರಿಸಿರುವುದು ಅರ್ಜಿದಾರರಿಗೆ ಗಂಭೀರ ಪೂರ್ವಗ್ರಹ ಘಾತವನ್ನು ಉಂಟುಮಾಡಿದೆ. ನ್ಯಾಯಸಮ್ಮತ ವಿಚಾರಣಾ ಚೌಕಟ್ಟನ್ನು ದುರ್ಬಲಗೊಳಿಸುವಂತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎ.ವಿಕ್ರಂ ರಾಜ್ ವಾದ ಮಂಡಿಸಿದ್ದರು.
ಅರ್ಜಿದಾರರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ, ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 34ರ (ಸಾಮಾನ್ಯ ಉದ್ದೇಶದಿಂದ ಹಲವರು ಸೇರಿ ಎಸಗುವ ಅಪರಾಧ) ಜೊತೆಗೆ 302 (ಕೊಲೆ), 307 (ಕೊಲೆ ಯತ್ನ), 323 (ಉದ್ದೇಶಪೂರ್ವಕವಾಗಿ ದೈಹಿಕ ಘಾತ ಉಂಟು ಮಾಡುವುದು), 324, 326, (ಅಪಾಯಕಾರಿ ಶಸ್ತ್ರಾಸ್ತ್ರ ಅಥವಾ ಸಾಧನಗಳನ್ನು ಅಂದರೆ ಚಾಕು, ಬೆಂಕಿ, ವಿಷ, ಪ್ರಾಣಿ ಇತ್ಯಾದಿಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ಯಾರಿಗಾದರೂ ಗಾಯಗೊಳಿಸುವಿಕೆ) ಮತ್ತು 504ರ (ಸಾರ್ವಜನಿಕ ಶಾಂತಿ ಭಂಗ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
‘ಪ್ರಕರಣದಲ್ಲಿನ ದೋಷಾರೋಪ ಪಟ್ಟಿಯಲ್ಲಿರುವ 1ರಿಂದ 8ರವರೆಗಿನ ಸಾಕ್ಷಿಗಳು ಪ್ರತ್ಯಕ್ಷದರ್ಶಿ ಸಾಕ್ಷಿಗಳಾಗಿದ್ದಾರೆ. ಒಬ್ಬೊಬ್ಬರ ಮುಖ್ಯ ವಿಚಾರಣೆ ಮುಗಿಯುತ್ತಿದ್ದಂತೆಯೇ ತಡಮಾಡದೆ ಪಾಟಿ ಸವಾಲು ನಡೆಸಲು ನಿರ್ದೇಶಿಸಿದರೆ, ಪ್ರತಿವಾದ ಏನೆಂಬುದನ್ನು ಅಕಾಲಿಕವಾಗಿ ಬಹಿರಂಗಪಡಿಸಂತಾಗುತ್ತದೆ. ಆದ್ದರಿಂದ, ಪಾಟಿ ಸವಾಲನ್ನು ಮುಂದೂಡಬೇಕು’ ಎಂದು ಕೋರಿ ಅರ್ಜಿದಾರ ಆರೋಪಿಗಳು; ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973ರ (ಸಿಆರ್ಪಿಸಿ) ಕಲಂ231(2)ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
