20/05/2025

Law Guide Kannada

Online Guide

ಸಾಲ ಪಡೆದವರೆಲ್ಲ ‘ಗ್ರಾಹಕ’ ಎಂದು ಪರಿಗಣಿಸಲಾಗದು- ಸುಪ್ರೀಂಕೋರ್ಟ್

ಬೆಂಗಳೂರು: ಬ್ಯಾಂಕ್ ನಿಂದ ಸಾಲ ಪಡೆದ ಉದ್ದೇಶ ಲಾಭ ಮಾಡಿಕೊಳ್ಳುವುದಕ್ಕೆ ಆಗಿದ್ದರೇ ಸಾಲ ಪಡೆದವರನ್ನ ಗ್ರಾಹಕರ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಗ್ರಾಹಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (NCDRC) ನೀಡಿದ ಆದೇಶವೊಂದರ ವಿರುದ್ಧ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಲಾಭ ಗಳಿಸುವ ಚಟುವಟಿಕೆಗೆ ಬಳಸಲು ಬ್ಯಾಂಕಿನಿಂದ ಸಾಲ ಪಡೆಯುವವರನ್ನು ಗ್ರಾಹಕ ರಕ್ಷಣಾ ಕಾನೂನಿನ ಅಡಿಯಲ್ಲಿ ಗ್ರಾಹಕ ಎಂದು ಪರಿಗಣಿಸಲಾಗದು ಎಂದು ತೀರ್ಪು ನೀಡಿದೆ.
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆಡ್ ಬ್ಯೂರೋ ಆಫ್ ಅಡ್ವರ್ ಟೈಸಿಂಗ್ ಸಂಸ್ಥೆಗೆ 75 ಲಕ್ಷ ರೂಪಾಯಿ ಪರಿಹಾರ ಹಾಗೂ ವ್ಯಾಜ್ಯದ ವೆಚ್ಚವನ್ನು ನೀಡುವಂತೆ ಸೆಂಟ್ರಲ್ ಬ್ಯಾಂಕ್ಗೆ ಆದೇಶಿಸಿತ್ತು. ಆಡ್ ಬ್ಯೂರೋ ಆಫ್ ಅಡ್ವರ್ಟೈಸಿಂಗ್ ಸಂಸ್ಥೆ ಒಂದು ಸುಸ್ತಿದಾರ ಸಂಸ್ಥೆ ಎಂಬುದಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಇನ್ನರ್ಮೇಷನ್ ಬ್ಯೂರೋ(ಸಿಬಿಲ್)ಗೆ ತಪ್ಪು ಮಾಹಿತಿ ನೀಡಿತ್ತು. ಈ ವಿಚಾರದಲ್ಲಿ ಬ್ಯಾಂಕ್ ಗೆ ಎನ್ ಸಿಡಿಆರ್ಸಿ ಈ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೊಚಾಡಿಯನ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಗಾಗಿ ಆಡ್ ಬ್ಯೂರೋ ಆಫ್ ಅಡ್ಡರ್ಟೈಸಿಂಗ್ ಸಂಸ್ಥೆಗೆ ಸೆಂಟ್ರಲ್ ಬ್ಯಾಂಕ್ 10 ಕೋಟಿ ರೂ. ಸಾಲ ನೀಡಿತ್ತು. ಈ ಸಾಲ ಮರುಪಾವತಿಸಲು ಸಂಸ್ಥೆ ವಿಫಲವಾಗಿತ್ತು.ಆ ಬಳಿಕ ಸಾಲ ವಸೂಲಾತಿ ನ್ಯಾಯಮಂಡಳಿಯಲ್ಲಿ ಆಡ್ ಬ್ಯೂರೋ ಆಫ್ ಅಡ್ವರ್ಟೈಸಿಂಗ್ ವಿರುದ್ಧ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವ್ಯಾಜ್ಯ ಹೂಡಿತ್ತು. ಈ ವ್ಯಾಜ್ಯದಲ್ಲಿ ಏಕಗಂಟಿನಲ್ಲಿ 3.56 ಕೋಟಿ ರೂ. ಪಾವತಿಸಲು ನಿರ್ಧರಿಸಿ ಪ್ರಕರಣವನ್ನು ಕೊನೆಗೊಳಿಸಲಾಗಿತ್ತು.

ಒಪ್ಪಂದದಂತೆ ಏಕಗಂಟಿನ ಹಣ ಪಾವತಿ ಮಾಡಿದ್ದರೂ ತಾನು ಸುಸ್ತಿದಾರ ಎಂಬುದಾಗಿ ಸಿಬಿಲ್ ಗೆ ಬ್ಯಾಂಕ್ ತಿಳಿಸಿದ್ದರಿಂದ ತನ್ನ ಪ್ರತಿಷ್ಠೆಗೆ ಧಕ್ಕೆ ಆಗಿದೆ. ಮತ್ತು ಇದರಿಂದ ತನಗೆ ವ್ಯವಹಾರಿಕವಾಗಿ ನಷ್ಟ ಆಗಿದೆ ಎಂದು ಆರೋಪಿಸಿ ಆಡ್ ಬ್ಯೂರೋ ಆಫ್ ಅಡ್ವರ್ಟೈಸಿಂಗ್ ಸಂಸ್ಥೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಗ್ರಾಹಕ ಆಯೋಗದ ಮೆಟ್ಟಿಲೇರಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.